September 23, 2026
Wednesday, September 23, 2026
spot_img

ಇಂಡಿಯಾ vs ಶ್ರೀಲಂಕಾ ಪಂದ್ಯದಲ್ಲಿ ಕಿರಿಕ್: ಜೈಸ್ವಾಲ್–ಫೆರ್ನಾಂಡೊಗೆ ಬಿತ್ತು ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ ನಡೆದ ಜೈಸ್ವಾಲ್–ಅಸಿತಾ ಫೆರ್ನಾಂಡೊ ನಡುವಿನ ಕಿರಿಕ್ ಗೆ ICC ಇದೀಗ ಅಂತ್ಯ ಹಾಡಿದೆ.

ಮೈದಾನದಲ್ಲೇ ಜಗಳಕ್ಕಿಳಿದ ಘಟನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇಬ್ಬರು ಆಟಗಾರರ ವಿರುದ್ಧ ಕ್ರಮ ಕೈಗೊಂಡಿದೆ. ಜೈಸ್ವಾಲ್ ಮತ್ತು ಫೆರ್ನಾಂಡೊಗೆ ತಲಾ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದ್ದು, ಇಬ್ಬರ ಶಿಸ್ತು ದಾಖಲೆಯಲ್ಲೂ ತಲಾ ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆಯಾಗಿದೆ.

ವಿಕೆಟ್ ಬಳಿಕ ಉಂಟಾದ ಬಿಗುವಿನ ಪರಿಸ್ಥಿತಿ

ಭಾರತದ ಮೊದಲ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಅಸಿತಾ ಫೆರ್ನಾಂಡೊ ಅವರ ಬೌಲಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ವಿಕೆಟ್ ಪಡೆದ ಬಳಿಕ ಫೆರ್ನಾಂಡೊ ಹಾಗೂ ಜೈಸ್ವಾಲ್ ನಡುವೆ ಮಾತಿನ ಚಕಮಕಿ ಆರಂಭವಾಯಿತು.

ಐಸಿಸಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಜೈಸ್ವಾಲ್ ಫೆರ್ನಾಂಡೊ ಅವರತ್ತ ತೆರಳಿದ ಬಳಿಕ ಇಬ್ಬರೂ ಪರಸ್ಪರ ವಾಗ್ವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಫೆರ್ನಾಂಡೊ ತಮ್ಮ ತಲೆಯನ್ನು ಜೈಸ್ವಾಲ್ ಕಡೆಗೆ ಬಾಗಿಸಿದ್ದಾರೆ ಪ್ರತಿಕ್ರಿಯೆಯಾಗಿ ಜೈಸ್ವಾಲ್ ಕೂಡ ಮುಂದೆ ಬಾಗಿದ್ದಾರೆ ಪರಿಣಾಮ ಇಬ್ಬರ ತಲೆಗಳು ಪರಸ್ಪರ ತಾಗಿವೆ.

ಲೆವೆಲ್-1 ಉಲ್ಲಂಘನೆ

ಈ ಘಟನೆಯನ್ನು ಐಸಿಸಿ ಆಟಗಾರರ ನೀತಿ ಸಂಹಿತೆಯ ಆರ್ಟಿಕಲ್ 2.12 ಅಡಿಯಲ್ಲಿ ಪರಿಗಣಿಸಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರ ಅಥವಾ ಇತರ ವ್ಯಕ್ತಿಯೊಂದಿಗೆ ಸೂಕ್ತವಲ್ಲದ ದೈಹಿಕ ಹಲ್ಲೆ ನಡೆಸುವುದಕ್ಕೆ ಈ ನಿಯಮ ಅನ್ವಯಿಸುತ್ತದೆ.

ತನಿಖೆಯ ಬಳಿಕ ಇಬ್ಬರೂ ಆಟಗಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಚಾರಣೆ ನಡೆಸುವ ಅಗತ್ಯವೂ ಎದುರಾಗಿಲ್ಲ. ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್‌ನ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಸೂಚಿಸಿದ ಶಿಕ್ಷೆಯನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ.

ಭಾರೀ ಶಿಕ್ಷೆಯಿಂದ ಪಾರಾದ ಜೈಸ್ವಾಲ್

ಆರಂಭದಲ್ಲಿ ಈ ಘಟನೆಯಿಂದ ಜೈಸ್ವಾಲ್‌ಗೆ ದೊಡ್ಡ ಶಿಕ್ಷೆ ಸಿಗಬಹುದು ಎಂಬ ಚರ್ಚೆ ನಡೆದಿತ್ತು. ಆದರೆ ಅಂತಿಮವಾಗಿ ಐಸಿಸಿ ಇದನ್ನು ಲೆವೆಲ್-1 ಉಲ್ಲಂಘನೆ ಎಂದು ಪರಿಗಣಿಸಿದೆ. ಹೀಗಾಗಿ ಜೈಸ್ವಾಲ್‌ಗೆ ಪಂದ್ಯ ನಿಷೇಧದಂತಹ ಕಠಿಣ ಕ್ರಮ ಎದುರಾಗಿಲ್ಲ. ಬದಲಿಗೆ ಶೇ.25ರಷ್ಟು ಪಂದ್ಯ ಸಂಭಾವನೆ ಕಡಿತ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಫೆರ್ನಾಂಡೊಗೂ ಇದೇ ಶಿಕ್ಷೆ ವಿಧಿಸಲಾಗಿದೆ.

ಇಬ್ಬರಿಗೂ ಮೊದಲ ಡಿಮೆರಿಟ್ ಪಾಯಿಂಟ್

ಕಳೆದ 24 ತಿಂಗಳ ಅವಧಿಯಲ್ಲಿ ಜೈಸ್ವಾಲ್ ಮತ್ತು ಫೆರ್ನಾಂಡೊ ಯಾವುದೇ ಡಿಮೆರಿಟ್ ಪಾಯಿಂಟ್ ಸಿಕ್ಕಿರಲಿಲ್ಲ. ಹೀಗಾಗಿ ಇಬ್ಬರ ಶಿಸ್ತು ದಾಖಲೆಯಲ್ಲೂ ಇದೀಗ ತಲಾ ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆಯಾಗಿದೆ.

ಒಟ್ಟಾರೆ, ಕೊಲಂಬೊ ಟೆಸ್ಟ್‌ನಲ್ಲಿ ಗಮನ ಸೆಳೆದ ಜೈಸ್ವಾಲ್–ಫೆರ್ನಾಂಡೊ ವಾಗ್ವಾದಕ್ಕೆ ಐಸಿಸಿ ಅಧಿಕೃತವಾಗಿ ತೆರೆ ಎಳೆದಿದ್ದು, ಇಬ್ಬರೂ ದಂಡದೊಂದಿಗೆ ಪ್ರಕರಣದಿಂದ ಹೊರಬಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !