ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿರಿಯಾ ದೇಶದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯರು ಆದಷ್ಟು ಬೇಗ ಹಿಂತಿರುಗುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
ಸದ್ಯ ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದಾರೆ, ಅವರಿಗೆ ಸಹಾಯ ಮಾಡಲು ಭಾರತೀಯ ರಾಯಭಾರ ಕಚೇರಿ ಲಭ್ಯವಿದೆ. ಯುದ್ಧ ಪೀಡಿತ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿಯು ಕಾರ್ಯಾಚರಣೆ ಮುಂದುವರಿಸಿದ್ದು, ಎಲ್ಲಾ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿದುಬಂದಿದೆ.
ಭಾರತೀಯರ ಸಹಾಯಕ್ಕಾಗಿ ಕಚೇರಿಯಲ್ಕಿ ತುರ್ತು ಸಹಾಯವಾಣಿ (ಮೊ.ಸಂ. +963 993385973 (ವಾಟ್ಸಾಪ್ ಸಹ ಇದೆ), ಇ-ಮೇಲ್ [email protected]) ಆರಂಭಿಸಲಾಗಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯರು ತಕ್ಷಣಕ್ಕೆ ಲಭ್ಯವಿರುವ ವಾಣಿಜ್ಯ ವಿಮಾನಗಳಲ್ಲಿ ಹೊರಟು ಭಾರತಕ್ಕೆ ತೆರಳಿ, ಉಳಿದವರು ಸುರಕ್ಷತೆ ಕಾಯ್ದುಕೊಳ್ಳಿ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಭಾರತೀಯರು ಆದಷ್ಟು ಬೇಗ ಹಿಂತಿರುಗುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಜೊತೆಗೆ ಮುಂದಿನ ಅಧಿಸೂಚನೆವರೆಗೆ ಭಾರತೀಯ ಪ್ರಜೆಗಳು ಸಿರಿಯಾ ಪ್ರಯಾಣವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ.
ಇಸ್ಲಾಮಿ ಉಗ್ರಗಾಮಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ (HTS) ನೇತೃತ್ವದ ಸಿರಿಯನ್ ಬಂಡುಕೋರರು ದಾಳಿಯನ್ನು ತೀವ್ರಗೊಳಿಸಿದ್ದಾರೆ. ಸಿರಿಯಾದ 3ನೇ ಅತಿದೊಡ್ಡ ನಗರವಾದ ಹೋಮ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ, ಈ ಬೆನ್ನಲ್ಲೇ ರಾಜಧಾನಿ ಡಮಾಸ್ಕಸ್‌ನ ಗಡಿ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನೂ ಬಂಡುಕೋರರು ಸಿರಿಯಾ ರಾಜಧಾನಿ ಡಮಾಸ್ಕಸ್ ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮದ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, ಭಾನುವಾರ ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.