ಹೊಸದಿಗಂತ ವರದಿ ಚಿತ್ರದುರ್ಗ :
ಕೇಂದ್ರ ಸರ್ಕಾರದ ‘ಬರ ನಿರ್ವಹಣೆ ಕೈಪಿಡಿ–2020’ರ ಮಾರ್ಗಸೂಚಿ ಹಾಗೂ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆಯೇ ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರ ಘೋಷಣೆಯಲ್ಲಿ ಯಾವುದೇ ರಾಜಕೀಯ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡಿಲ್ಲ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಮಳೆ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇದರಲ್ಲಿ 89 ತಾಲ್ಲೂಕುಗಳು ತೀವ್ರ ಹಾಗೂ 12 ತಾಲ್ಲೂಕುಗಳು ಸಾಧಾರಣ ಬರ ಪರಿಸ್ಥಿತಿ ಎದುರಿಸುತ್ತಿವೆ. ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಹಿರಿಯೂರು, ಚಳ್ಳಕೆರೆ ಹಾಗೂ ಹೊಸದುರ್ಗವನ್ನು ತೀವ್ರ ಬರಪೀಡಿತ ಎಂದು ಗುರುತಿಸಲಾಗಿದ್ದು, ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳು ಪಟ್ಟಿಯಿಂದ ಹೊರಗುಳಿದಿವೆ ಎಂದರು.
ರಾಜ್ಯದ 25 ಜಿಲ್ಲೆಗಳ 175 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಕೇಂದ್ರ ಸರ್ಕಾರದ ಮಾನದಂಡಗಳಡಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪಟ್ಟಿಯಿಂದ ಹೊರಗುಳಿದ ತಾಲ್ಲೂಕುಗಳಲ್ಲಿ ಸತತ ಮೂರು ವಾರಗಳ ಶುಷ್ಕ ವಾತಾವರಣ ಮುಂದುವರಿದರೆ ಮರುಮೌಲ್ಯಮಾಪನ ನಡೆಸಿ ಎರಡನೇ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲು ಸರ್ಕಾರ ಸಿದ್ಧವಿದೆ. ಈ ಹಂತದಲ್ಲಿ ಜಿಲ್ಲೆಯ ಉಳಿದ ತಾಲ್ಲೂಕುಗಳನ್ನೂ ಪರಿಗಣಿಸುವ ಭರವಸೆ ನೀಡಿದರು.
ಮೂರು ತಾಲ್ಲೂಕು ಹೊರಗುಳಿಯಲು ತಾಂತ್ರಿಕ ಕಾರಣ
ಕೇಂದ್ರ ಸರ್ಕಾರದ ‘ಬರ ನಿರ್ವಹಣೆ ಕೈಪಿಡಿ–2020’ರ ಮಾರ್ಗಸೂಚಿ ಪ್ರಕಾರ, ಮೊದಲ ಹಂತದಲ್ಲಿ ವಾಡಿಕೆ ಮಳೆಗಿಂತ ಶೇ.60ಕ್ಕಿಂತ ಹೆಚ್ಚು ಕೊರತೆ ಹಾಗೂ ಸತತ ಮೂರು ವಾರಗಳ ಶುಷ್ಕ ವಾತಾವರಣ ದಾಖಲಾಗಿದ್ದರೆ ಬರಪೀಡಿತ ಪ್ರದೇಶವೆಂದು ಘೋಷಿಸಲಾಗುತ್ತದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಜೂನ್ 1ರಿಂದ ಆಗಸ್ಟ್ 12ರವರೆಗೆ ಚಳ್ಳಕೆರೆ 199 ಮಿ.ಮೀ., ಚಿತ್ರದುರ್ಗ 242 ಮಿ.ಮೀ., ಹಿರಿಯೂರು 138 ಮಿ.ಮೀ., ಹೊಳಲ್ಕೆರೆ 225 ಮಿ.ಮೀ., ಹೊಸದುರ್ಗ 186 ಮಿ.ಮೀ. ಹಾಗೂ ಮೊಳಕಾಲ್ಮೂರು 214 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಶೇ.60ರಷ್ಟು ಮಳೆ ಕೊರತೆ ದಾಖಲಾಗಿಲ್ಲ. ಆದರೆ ಹಿರಿಯೂರು, ಚಳ್ಳಕೆರೆ ಹಾಗೂ ಹೊಸದುರ್ಗದಲ್ಲಿ ಸತತ ಮೂರು ವಾರಗಳ ಶುಷ್ಕ ವಾತಾವರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಮೂರು ತಾಲ್ಲೂಕುಗಳು ಮೊದಲ ಹಂತದ ಬರಪಟ್ಟಿಗೆ ಸೇರ್ಪಡೆಯಾಗಿವೆ ಎಂದು ಸಚಿವರು ವಿವರಿಸಿದರು.
ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಸತತ ಶುಷ್ಕ ವಾತಾವರಣ ದಾಖಲಾಗದಿರುವುದೇ ಅವುಗಳು ಪಟ್ಟಿಯಿಂದ ಹೊರಗುಳಿಯಲು ತಾಂತ್ರಿಕ ಕಾರಣವಾಗಿದೆ. ಬರ ಘೋಷಣೆಯಲ್ಲಿ ಯಾವುದೇ ರಾಜಕೀಯ ಅಥವಾ ಪಕ್ಷಪಾತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ರಘುಮೂರ್ತಿ ತಿಳಿಸಿದರು.
ಎರಡನೇ ಹಂತದಲ್ಲಿ ಬೆಳೆ, ಮಣ್ಣಿನ ತೇವಾಂಶ ಪರಿಶೀಲನೆ
ಎರಡನೇ ಹಂತದಲ್ಲಿ ಬರಪೀಡಿತ ತಾಲ್ಲೂಕುಗಳಲ್ಲಿ ಬಿತ್ತನೆಯಾದ ಬೆಳೆಗಳ ಸ್ಥಿತಿ, ಉಪಗ್ರಹ ಆಧಾರಿತ ಸಸ್ಯವರ್ಗ ಸೂಚ್ಯಂಕ, ಮಣ್ಣಿನ ತೇವಾಂಶ ಹಾಗೂ ಅಂತರ್ಜಲ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಈ ದತ್ತಾಂಶಗಳನ್ನು ಕ್ರೋಢೀಕರಿಸಿ ಅಧಿಕಾರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದರು.
ಕೆಎಸ್‌ಎನ್‌ಡಿಎಂಸಿ ನಡೆಸಿದ ಸಮಗ್ರ ಬರ ಮೌಲ್ಯಮಾಪನದ ಆಧಾರದ ಮೇಲೆ ಒಟ್ಟು 102 ತಾಲ್ಲೂಕುಗಳಲ್ಲಿ ಮೂರನೇ ಹಂತದ ಸ್ಥಳೀಯ ತನಿಖೆ ಹಾಗೂ ಕ್ಷೇತ್ರ ಪರಿಶೀಲನೆ ನಡೆಸಲು ಆಗಸ್ಟ್ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:
ಆಗಸ್ಟ್ ದ್ವಿತೀಯಾರ್ಧ ಹಾಗೂ ಸೆಪ್ಟೆಂಬರ್ ತಿಂಗಳ ಮಳೆ ಮುನ್ಸೂಚನೆ ಮತ್ತು ಕೃಷಿ ಬೆಳೆಗಳ ಮೇಲಿನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು 2026ರ ಖಾರೀಫ್ ಋತುವಿನ ಕೊನೆಯವರೆಗೆ ಬರ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು. ನಿಯಮಾನುಸಾರ ಹೆಚ್ಚುವರಿ ತಾಲ್ಲೂಕುಗಳನ್ನು ಹಂತ ಹಂತವಾಗಿ ಬರಪೀಡಿತ ಎಂದು ಘೋಷಿಸುವ ಅವಕಾಶವೂ ಇದೆ ಎಂದರು.
ಬರ ಘೋಷಣೆಗೆ ಹೋಬಳಿ ಘಟಕ ಪರಿಗಣನೆಗೆ ಮನವಿ
ಪ್ರಸ್ತುತ ಬರ ಘೋಷಣೆಗೆ ತಾಲ್ಲೂಕನ್ನು ಘಟಕವಾಗಿ ಪರಿಗಣಿಸಲಾಗುತ್ತಿದೆ. ಇದರಿಂದ ನಿರ್ದಿಷ್ಟ ಪ್ರದೇಶಗಳ ರೈತರಿಗೆ ಅನ್ಯಾಯವಾಗುವ ಸಾಧ್ಯತೆ ಇರುವುದರಿಂದ, ಹೋಬಳಿ ಘಟಕವನ್ನು ಆಧಾರವಾಗಿಟ್ಟುಕೊಂಡು ಬರ ಪರಿಸ್ಥಿತಿ ಪರಿಗಣಿಸುವಂತೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯ ಕೊರತೆ ಇರುವುದು ನಿಜ. ನಿರಂತರ ಮಳೆಯಾಗದೆ ಅಸಮತೋಲಿತವಾಗಿ ಮಳೆಯಾಗುತ್ತಿರುವುದು ರೈತರಿಗೆ ತೊಂದರೆ ತಂದಿದೆ. ಹೋಬಳಿವಾರು ಬರ ಪರಿಸ್ಥಿತಿ ಪರಿಗಣಿಸಿದರೆ ನೈಜ ಸಂತ್ರಸ್ತ ರೈತರಿಗೆ ನೆರವು ನೀಡಲು ಸಾಧ್ಯವಾಗಲಿದೆ. ಬೆಳೆ ಹಾನಿ ಹಾಗೂ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ. ಸಿಇಒ ಡಾ.ಎಸ್.ಆಕಾಶ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.



