ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಮುಂದುವರಿಯುತ್ತಿದೆ. ದಕ್ಷಿಣ ಉಕ್ರೇನ್‌ನಲ್ಲಿರುವ ಕಾಖೋವ್ಕಾ ಜಲವಿದ್ಯುತ್ ಅಣೆಕಟ್ಟು ಸದ್ಯ ನಾಶವಾಗಿದ್ದು, ಈ ಅಣೆಕಟ್ಟಿನಿಂದು ನೀರು ಹರಿಯುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ದಕ್ಷಿಣ ಉಕ್ರೇನ್‌ನಲ್ಲಿ ಡ್ನಿಪ್ರೊ ನದಿಯ ಮೇಲೆ ನಿರ್ಮಿಸಲಾದ ಕಾಖೋವ್ಕಾ ಅಣೆಕಟ್ಟು ಮುಖ್ಯವಾಗಿ ಕ್ರಿಮಿಯನ್ ಪೆನಿನ್ಸುಲಾ ಮತ್ತು ಪರಮಾಣು ಸ್ಥಾವರಕ್ಕೆ ನೀರನ್ನು ಪೂರೈಸುತ್ತದೆ. ಈ ಒಂದು ಅಣೆಕಟ್ಟಿನ ಕುಸಿತದಿಂದಾಗಿ, ಅದರ ಕೆಳಗೆ ಅನೇಕ ನಗರಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಕೂಡಲೇ ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಉಕ್ರೇನ್ ಸರ್ಕಾರ ಜನರಿಗೆ ಮನವಿ ಮಾಡಿದೆ. ಅಣೆಕಟ್ಟು ನಾಶವಾಗಿರುವುದರ ಬಗ್ಗೆ ರಷ್ಯಾದ ಪಡೆಗಳು ಯಾವುದೇ ಸ್ಪಷ್ಟನೆ ನೀಡಿಲ್ಲ..ಆದರೆ ಉಕ್ರೇನ್ ಮಾತ್ರ ರಷ್ಯಾದ ಮೇಲೆಯೇ ಆರೋಪ ಮಾಡುತ್ತಿದೆ.
ಇದರಿಂದ ಎಚ್ಚೆತ್ತ ಉಕ್ರೇನ್ ಸೇನೆ ಸ್ಥಳೀಯ ನಗರದ ಜನರನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದರು. ಉಕ್ರೇನ್‌ನ ರಾಷ್ಟ್ರೀಯ ಪೊಲೀಸ್-ರಾಜ್ಯ ತುರ್ತು ಸೇವೆಗಳು ಖೆರ್ಸನ್ ಮತ್ತು 10 ಹಳ್ಳಿಗಳನ್ನು ಒಳಗೊಂಡಂತೆ ಡ್ನೀಪರ್ ನದಿಯ ಬಲದಂಡೆಯ ಪ್ರವಾಹ ವಲಯಗಳಲ್ಲಿ ನಾಗರಿಕರನ್ನು ಸ್ಥಳಾಂತರಿಸುತ್ತಿವೆ ಎಂದು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಜಲಾಶಯದ ನೀರಿನ ಮಟ್ಟ ಕುರಿತು ಹಲವು ದಿನಗಳ ಕಾಲ ಆತಂಕ ಎದುರಾಗಲಿದೆ. ವಿದ್ಯುತ್ ಸ್ಥಾವರದ ಮೇಲೆ ಹಿಡಿತ ಸಾಧಿಸಲು ರಷ್ಯಾ ಈ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ. ಅಣೆಕಟ್ಟಿನ ನಾಶವು ಹೆಚ್ಚಿನ ಸಂಖ್ಯೆಯ ವಿನಾಶಕಾರಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಶಂಕಿಸಲಾಗಿದೆ.
ಜಲಾಶಯದಲ್ಲಿನ ನೀರಿನ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಇದು ಅಪಾಯವನ್ನುಂಟುಮಾಡುತ್ತದೆ, ಇದು ಯುರೋಪ್‌ನ ಅತಿದೊಡ್ಡ ಝಪೊರಿಜಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ನೀರನ್ನೊದಗಿಸುತ್ತದೆ. ಉಕ್ರೇನಿಯನ್ ಪ್ರತಿದಾಳಿಯನ್ನು ತಡೆಯಲು ರಷ್ಯನ್ನರು ವಿದ್ಯುತ್ ಸ್ಥಾವರದಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಲಿದೆ ಎಂದು ಉಕ್ರೇನಿಯನ್ ಗುಪ್ತಚರ ಇಲಾಖೆ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.