ರಾಜ್ಯದಲ್ಲಿ ಮಳೆಯಿಂದ 81,589 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ 81,589 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಶುಕ್ರವಾರ ನಡೆಯಿತು.

ರಾಜ್ಯದಲ್ಲಿ ಒಟ್ಟು 67 ಸಾವು ಸಂಭವಿಸಿದ್ದು, 66 ಪ್ರಕರಣಗಳಲ್ಲಿ 329 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಮಳೆಯಿಂದ 81,589 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ರಾಜ್ಯಾದ್ಯಂತ 82 ಲಕ್ಷ ಹೆಕ್ಟೇರ್‌ ಗುರಿಗೆ ಎದುರಾಗಿ 7೦ ಲಕ್ಷ ಹೆಕ್ಟೇರ್‌ ಬಿತ್ತನೆ ಆಗಿದೆ. ಈ ಬಾರಿ ಗುರಿ ಮೀರಿ ಸಾಧನೆ ಆಗುವ ನಿರೀಕ್ಷೆ ಇದೆ. ಮುಂಗಾರು ಪೂರ್ವ ಬಿತ್ತನೆ ಆಗಿರುವ ಉದ್ದು ಮತ್ತು ಹೆಸರು ಕಟಾವಿಗೆ ಬಂದಿದೆ. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ಏತ ನೀರಾವರಿ ಯೋಜನೆಗಳಡಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಅಂತರ್ಜಲ ಮಟ್ಟ, ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುವುದು ಎಂದು ಸಿಎಂ ಹೇಳಿದರು.

ರಾಜ್ಯದ ಜಲಾಶಯಗಳು ಒಟ್ಟು ಶೇ. 89 ರಷ್ಟು ಭರ್ತಿ ಆಗಿವೆ. ಈ ಹಿನ್ನೆಲೆಯಲ್ಲಿ ಕೆರೆಗಳನ್ನು ತುಂಬಿಸುವಂತೆ ಹಾಗೂ ಮಳೆ ಮುನ್ಸೂಚನೆ ಆಧರಿಸಿ, ಮುಂಚಿತವಾಗಿಯೇ ಸೂಕ್ತ ಪ್ರಮಾಣದ ನೀರನ್ನು ಜಲಾಶಗಳಿಂದ ಹೊರಗೆ ಬಿಡುವ ಮೂಲಕ, ಮಳೆಯಾದಾಗ ಜಲಾಶಯಗಳಲ್ಲಿ ಏಕಾಏಕಿ ನೀರಿನ ಸಂಗ್ರಹ ಹೆಚ್ಚಾಗಿ ಪ್ರವಾಹ ಉಂಟಾಗುವುದನ್ನು ತಡೆಗಟ್ಟಬೇಕು. ಈ ಕುರಿತು ಸರ್ಕಾರದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಸೇತುವೆಗಳ ಫಿಟ್‌ನೆಸ್‌ಗಳ ಬಗ್ಗೆ ವರದಿಯನ್ನು ಲೋಕೋಪಯೋಗಿ ಇಲಾಖೆಯಿಂದ ಪಡೆಯಬೇಕು. ಸಂಪರ್ಕ ರಸ್ತೆಗಳು ಕುಸಿದಿದ್ದರೆ ಅವುಗಳನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ಎಲ್ಲಾ ಸೇತುವೆ, ರಸ್ತೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು. ಮುಳುಗು ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಬೇಕು. ಯಾವುದೇ ಕಾರಣಕ್ಕೂ ವಾಹನ ಸಂಚರಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲಿ 67 ಸಾವು
ಈ ಬಾರಿ ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಒಟ್ಟು 67 ಸಾವು ಸಂಭವಿಸಿದ್ದು, 66 ಪ್ರಕರಣಗಳಲ್ಲಿ 329 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಅಂಗನವಾಡಿ , ಶಾಲೆ ಕಟ್ಟಡಗಳ, ಸೇತುವೆಗಳು, ಕರೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಮಲೆನಾಡು, ಕರಾವಳಿ ಭಾಗಗಳಲ್ಲಿ ಇರುವ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿ, ಕ್ರಿಯಾ ಯೋಜನೆಯಲ್ಲಿ ಆದ್ಯತೆ ಮೇರೆಗೆ ದುರಸ್ತಿ ಪಡಿಸಬೇಕು. ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಸಲಾಗಿದೆ. 20 ಸಾವಿರ ರೂ. ಅನುದಾನ ಒದಗಿಸಲಾಗಿದೆ. ಸಾವು ನೋವು ತಪ್ಪಿಸುವುದು ನಮ್ಮ ಆದ್ಯತೆ. ಗ್ರಾಮ ಪಂಚಾಯತ್‌ ಟಾಸ್ಕ್‌ ಫೋರ್ಸ್‌ ಬಲಪಡಿಸಲು ಕ್ರಮ ಕೈಗೊಳ್ಳಬೇಕು. ಮನೆ ಕುಸಿತ, ನೀರಿನಲ್ಲಿ ಕೊಚ್ಚಿ ಹೋಗುವಂತಹ ಪ್ರಕರಣಗಳಲ್ಲಿ ಸಾವು ನೋವು ತಪ್ಪಿಸಲು ಸಾಧ್ಯವಿದೆ. ಶಿಥಿಲವಾದ ಮನೆಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮಮಟ್ಟದಲ್ಲಿ ಮೊದಲೇ ಗುರುತಿಸಬೇಕು ಎಂದು ಸಿಎಂ ತಿಳಿಸಿದರು.

ಒಟ್ಟು 1283 ಮನೆಗಳು ಶೇ. 75 ಕ್ಕಿಂತ ಹೆಚ್ಚು ಹಾನಿಗೊಳಗಾಗಿದೆ. ಅದರಲ್ಲಿ 879 ಪ್ರಕರಣಗಳಲ್ಲಿ ತಲಾ 1.2೦ ಲಕ್ಷ ರೂ. ನಂತೆ 10.54 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇದರೊಂದಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗುವುದು. ಈಗಾಗಲೇ 500 ಮನೆ ಮಂಜೂರು ಮಾಡಲಾಗಿದೆ. 2817 ಕುಟುಂಬಗಳಿಗೆ ಬಟ್ಟೆ ಬರೆ ಹಾನಿಗಾಗಿ 2500 ರೂ. ನಂತೆ ಹಾಗೂ 2811 ಕುಟುಂಬಗಳಿಗೆ ಗೃಹೋಪಯೋಗಿ ಸಾಮಗ್ರಿಗಳ ಹಾನಿಗೆ ತಲಾ 2500 ರಂತೆ ಒಟ್ಟು 1.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ರಾಜ್ಯದಲ್ಲಿ ಮನೆ ಕುಸಿದು 29 ಸಾವು ಸಂಭವಿಸಿದ್ದು, ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಶಿಥಿಲಗೊಂಡ ಮನೆಗಳಲ್ಲಿರುವವರನ್ನು ಖಾಲಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಪ್ರವಾಹ ಇರುವಾಗ ನೀರಿಗೆ ಇಳಿಯಲು ಬಿಡಬಾರದು, ಪೊಲೀಸರ ಸಹಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್‌, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಈ ನಿಟ್ಟಿನಲ್ಲಿ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಪ್ರವಾಹ, ಭಾರಿ ಮಳೆ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡರೆ, ಕೂಡಲೇ ಸರಿಪಡಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಯಿತು. ಅಗತ್ಯವಿರುವ ಟ್ರಾನ್ಸ್‌ಫಾರ್ಮರ್‌ಗಳು, ಕಂಬಗಳನ್ನು ಲಭ್ಯಗೊಳಿಸಲು ಸೂಚಿಸಲಾಯಿತು. ಒಟ್ಟಾರೆಯಾಗಿ ಎಲ್ಲ ಇಲಾಖೆಗಳೂ ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಜೂನ್‌ 1 ರಿಂದ ಆಗಸ್ಟ್‌ 15 ರ ವರೆಗೆ ವಾಡಿಕೆಗಿಂತ ಶೇ. 22 ರಷ್ಟು ಹೆಚ್ಚು ಮಳೆಯಾಗಿದ್ದು, ಚಾಮರಾಜನಗರ, ಮಂಡ್ಯ ತುಮಕೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಬಾರಿ ಇಡೀ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ 4 ವಾರಗಳಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ, ಮಲೆನಾಡಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಿರುಗುಪ್ಪ, ದೇವದುರ್ಗ, ಔರಾದ್‌, ಬೀದರ್‌, ಕಮಲಾನಗರ, ಹುಬ್ಬಳ್ಳಿ, ಶಹಾಪುರ, ಯಾದಗಿರಿ ಮೊದಲಾದ ಒಂಬತ್ತು ತಾಲ್ಲೂಕುಗಳಲ್ಲಿ ಈಗ ಕಡಿಮೆ ಮಳೆ ಇದೆ. ಆದರೆ ಈ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗುವುದಾಗಿ ಮುನ್ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!