ಹೊಸದಿಗಂತ ವರದಿ, ಚಿತ್ರದುರ್ಗ:
ಒಡಿಸ್ಸಾದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಕೋಟ್ಯಾಂತರ ರೂ.ಗಳ ಅಕ್ರಮ ಎಸಗಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ಸೋಮವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಧೀರಜ್ ಸಾಹು ಬಳಿ ಸಿಕ್ಕಿರುವ ಹಣವನ್ನು ೪೦ ರಿಂದ ೫೦ ಯಂತ್ರಗಳ ಮೂಲಕ ೧೫೦ ಮಂದಿ ಆರು ದಿನಗಳಿಂದ ಎಣಿಸುತ್ತಿದ್ದರೂ ಇನ್ನು ಪೂರ್ತಿಯಾಗಿಲ್ಲ. ಇದುವರೆವಿಗೂ ೩೫೪ ಕೋಟಿ ರೂ.ಗಳು ಪತ್ತೆಯಾಗಿರುವುದನ್ನು ನೋಡಿದರೆ ಕಾಂಗ್ರೆಸ್ ಲೂಟಿಕೋರ, ಭಷ್ಟ ಸರ್ಕಾರ ಎನ್ನುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಬಹುತೇಕ ಅವಧಿಗೆ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ. ಇದರಿಂದ ಸಾವಿರಾರು ಕೋಟಿ ರೂ. ದೇಶದ ಹಣವನ್ನು ಲೂಟಿ ಮಾಡಲಾಗಿದೆ. ಇದಕ್ಕೆ ಒಡಿಶಾದ ಧೀರಜ್ ಸಾಹು ಬಳಿ ಸಿಕ್ಕಿರುವ ಅಪಾದ ಪ್ರಮಾಣದ ಹಣವೇ ಸಾಕ್ಷಿ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಇಂತಹ ದೊಡ್ಡ ಭಷ್ಟಾಚಾರ ನಡೆದಿರುವುದನ್ನು ಇದುವರೆವಿಗೂ ದೇಶದ ಜನ ಕಂಡಿರಲಿಲ್ಲ. ಹಾಗಾಗಿ ಈ ಕುರಿತು ಕೂಲಂಕುಶ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಪತ್‌ಕುಮಾರ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಕಲ್ಲೇಶಯ್ಯ ಕೆ. ಮಲ್ಲಿಕಾರ್ಜುನ್, ಗೌರಣ್ಣ, ವೆಂಕಟೇಶ್‌ಯಾದವ್, ಡಿ.ಕೆ.ಜಯಣ್ಣ, ಎಲ್.ವಿ.ಪ್ರಶಾಂತ್, ನಾಗರಾಜ್‌ಬೇದ್ರೆ, ದಗ್ಗೆಶಿವಪ್ರಕಾಶ್, ನಂದಿ ನಾಗರಾಜ್, ತಿಪ್ಪೇಸ್ವಾಮಿ, ಕಿಟ್ಟಿ, ಕಿರಣ, ಶಂಭು, ಅನಿಲ್‌ಭರತ್, ಕುಮಾರ್, ರಾಮು, ಚಂದ್ರು, ಉಷಾ ಬೇದ್ರೆ, ಕವನ, ವೀಣ, ಹರೀಶ್, ಅನಿಲ್‌ಕುಮಾರ್ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.