ಗಡಿಯಾಚೆಗೂ ರುಪಾಯಿ ವ್ಯಾಪಾರ: ದಕ್ಷಿಣ ಏಷ್ಯಾ ದೇಶಗಳೊಂದಿಗೆ ಚರ್ಚೆ- ಶಕ್ತಿಕಾಂತ್‌ ದಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತವು ವಿಶ್ವದಲ್ಲೇ ಬಲಿಷ್ಟ ಆರ್ಥಿಕತೆಯಾಗುವತ್ತ ಮುನ್ನುಗ್ಗುತ್ತಿದೆ. ಕೈಗಾರಿಕೀಕರಣ, ಉತ್ಪಾದನೆಗೆ ಪ್ರಾಶಸ್ತ್ಯ ಕೊಡುತ್ತ, ದೇಶದ ಕರೆನ್ಸಿಯನ್ನು ಬಲಗೊಳಿಸಲು ಎಲ್ಲ ರೀತಿಯಿಂದಲೂ ಪ್ರಯತ್ನ ನಡೆಸುತ್ತಿದೆ. ಜಾಗತಿಕ ವಿದ್ಯಮಾನಗಳು, ಹಣದುಬ್ಬರ ಇತ್ಯಾದಿ ಕಾರಣಗಳೀಮದ ರುಪಾಯಿ ಮೌಲ್ಯ ಕುಸಿಯುತ್ತಿದೆ ಎನ್ನುವುದು ಅಲ್ಪ ಮಟ್ಟಿಗೆ ಒಪ್ಪಿಕೊಳ್ಳಬಹುದಾದ ವಿಷಯವಾಗಿದ್ದರೂ ಜಗತ್ತಿನ ಇತರ ಪ್ರಮುಖ ಕರೆನ್ಸಿಗಳಿಗೆ ಹೋಲಿಸಿದರೆ ರುಪಾಯಿ ಅಷ್ಟೇನೂ ಕುಸಿದಿಲ್ಲ ಎನ್ನಬಹುದು. ಇತ್ತೀಚೆಗಷ್ಟೇ ಇ-ರುಪಿ ಉಪಕ್ರಮವನ್ನೂ ಜಾರಿಗೆ ತರಲಾಗಿದ್ದು ರುಪಾಯಿಯನ್ನು ಅಂತರಾಷ್ಟ್ರೀಯ ವಿನಿಮಯಕ್ಕೆ ಬಳಸಲು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಗಡಿಯಾಚೆಗೆ ರುಪಾಯಿಯ ಮೂಲಕ ವ್ಯಾಪಾರ ಮಾಡಲು ದಕ್ಷಿಣ ಏಷ್ಯಾ ದೇಶಗಳೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಸರ್ಕಾರ ಮತ್ತು ಭಾರತದ ಕೇಂದ್ರ ಬ್ಯಾಂಕ್‌ ಆರ್‌ಬಿಐ ದಕ್ಷಿಣ ಏಷ್ಯಾ ದೇಶಗಳೊಂದಿಗೆ ಚರ್ಚೆ ನಡೆಸುತ್ತಿದ್ದು ರುಪಾಯಿಯನ್ನು ಗಡಿಯಾಚೆಗಿನ ವಹಿವಾಟಿಗೆ ಬಳಸುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದಿರುವ ದಾಸ್‌ ಹೇಳಿದ್ದೇನೆಂದರೆ “ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಹೆಚ್ಚಿನ ಆಂತರಿಕ-ಪ್ರಾದೇಶಿಕ ವ್ಯಾಪಾರವು ಬೆಳವಣಿಗೆ ಮತ್ತು ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಆರ್‌ಬಿಐ ಮತ್ತು ಭಾರತ ಸರ್ಕಾರವು ಅಂತರರಾಷ್ಟ್ರೀಯ ವ್ಯಾಪಾರದ ರೂಪಾಯಿ ಇತ್ಯರ್ಥವನ್ನು ಪ್ರಾರಂಭಿಸಿದೆ. ನಾವು ಈಗಾಗಲೇ ಈ ಪ್ರದೇಶದ ಕೆಲವು ದೇಶಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಅಲ್ಲದೇ ಭಾರತದ ಡಿಜಿಟಲ್‌ ಪಾವತಿ ಸೇವೆಯಾದ ಯುಪಿಐ (UPI) ಸೌಲಭ್ಯವನ್ನು ಪ್ರಾರಂಭಿಸುವ ಕುರಿತು ಈ ಪ್ರದೇಶದ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಭೂತಾನ್ ಮತ್ತು ನೇಪಾಳದಂತಹ ಇತರ ದೇಶಗಳೊಂದಿಗೆ ಗಡಿಯಾಚೆಗಿನ ಪಾವತಿಗಳನ್ನು ಮಾಡಲು UPI ಸೌಲಭ್ಯವನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ”

ಇತ್ತೀಚೆಗಷ್ಟೇ ರಷ್ಯಾ ಸೇರಿದಂತೆ 13 ಇತರ ದೇಶಗಳು ಅಂತರಾಷ್ಟ್ರೀಯ ವ್ಯಾಪಾರಕ್ಕೆ ರುಪಾಯಿಯನ್ನು ಬಳಸುವುದಕ್ಕೆ ಸಮ್ಮತಿ ಸೂಚಿಸಿದ್ದವು. ಈ ನಿಟ್ಟಿನಲ್ಲಿ ಶಕ್ತಿಕಾಂತ್‌ ದಾಸ್‌ ಅವರ ಈ ಮಾತುಗಳು ಭಾರತದ ಪಾಲಿಗೆ ಆಶಾದಾಯಕ ಬೆಳವಣಿಗೆ ಎನ್ನಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!