ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕವಾಗಿ ಕಚ್ಚಾತೈಲದ ಬೆಲೆ ಬ್ಯಾರೆಲ್ ಗೆ 90 ಡಾಲರುಗಳನ್ನು ತಲುಪಿದೆ. ಇದು ಅಕ್ಟೋಬರ್ 2014ರ ನಂತರ ಕಾಣುತ್ತಿರುವ ಅತಿದೊಡ್ಡ ಬೆಲೆ ಏರಿಕೆ.
ರಷ್ಯ ಮತ್ತು ಉಕ್ರೇನ್ ನಡುವೆ ತಲೆದೋರಿರುವ ಬಿಕ್ಕಟ್ಟು ಹಾಗೂ ಯುದ್ಧಭೀತಿಯೇ ಜಾಗತಿಕವಾಗಿ ತೈಲಬೆಲೆ ಏರುತ್ತಿರುವುದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯವು ಯುರೋಪಿಗೆ ನೈಸರ್ಗಿಕ ಅನಿಲವನ್ನು ಪೂರೈಸುತ್ತಿರುವ ಮುಖ್ಯ ರಾಷ್ಟ್ರಗಳಲ್ಲಿ ಒಂದು. ಇತ್ತ ಅಮೆರಿಕವು ಉಕ್ರೇನ್ ಮೇಲೆ ರಷ್ಯ ಯಾವುದೇ ರೀತಿ ಆಕ್ರಮಣ ತೋರಿದರೂ ಕಠಿಣ ಜಾಗತಿಕ ದಿಗ್ಬಂಧನಗಳನ್ನು ವಿಧಿಸುವುದಾಗಿ ಹೇಳಿದೆ. ಈ ಎಲ್ಲ ಕಾರಣಗಳಿಂದ ಜಾಗತಿಕ ತೈಲ ಮಾರುಕಟ್ಟೆ ಅದಾಗಲೇ ಅನಿಶ್ಚಿತತೆ ಎದುರುನೋಡಿ, ಈ ಬಗೆಯ ಬೆಲೆ ಏರಿಕೆಗೆ ದಾರಿಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದಲ್ಲಿ ಇಂಧನ ಬೆಲೆ ಅದಾಗಲೇ ಏರುಮುಖದಲ್ಲಿದೆ. ಆದರೆ, ಸದ್ಯದಲ್ಲೇ ಐದು ರಾಜ್ಯಗಳಲ್ಲಿ ಚುನಾವಣೆಗಳಿರುವುದರಿಂದ, ಜಾಗತಿಕ ಬೆಲೆ ಏರಿಕೆ ನಡುವೆಯೂ ದೇಶೀಯವಾಗಿ ಬಹಳ ಬದಲಾವಣೆಗಳು ಆಗಲಾರವು ಎಂದು ಪರಿಣತರು ಲೆಕ್ಕ ಹಾಕುತ್ತಿದ್ದಾರೆ.