ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಪ್ಟೋ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಥುವೇನಿಯಾದ ಪ್ರಜೆಯನ್ನು ಕೇರಳದಲ್ಲಿ ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ.
ಅಮೆರಿಕದ ಸೀಕ್ರೆಟ್ ಸರ್ವೀಸ್ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 46 ವರ್ಷದ ಲಿಥುವೇನಿಯಾದ ಅಲೆಕ್ಸೆಜ್ ಬೆಸಿಯೊಕೊವ್ ತನ್ನ ಕುಟುಂಬದೊಂದಿಗೆ ಕೇರಳಕ್ಕೆ ಬಂದಿದ್ದರು. ಈ ವೇಳೆವರ್ಕಲಾ ಪೊಲೀಸರ ಸಹಾಯದಿಂದ ಬಂಧನ ಮಾಡಲಾಗಿದೆ.
ಈ ವಾರದ ಆರಂಭದಲ್ಲಿ ಅಮೆರಿಕದ ಅಧಿಕಾರಿಗಳ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯವು ತಾತ್ಕಾಲಿಕ ಬಂಧನ ವಾರಂಟ್ ಪಡೆದಿತ್ತು. ನಂತರ ಸಿಬಿಐ ಮತ್ತು ಕೇರಳ ಪೊಲೀಸರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ಗ್ಯಾರಂಟೆಕ್ಸ್ (Garantex) ಹೆಸರಿನಲ್ಲಿ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದನು.
ಭಯೋತ್ಪಾದನೆ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ಸಂಘಟನೆಗಳಿಂದ ಕನಿಷ್ಠ 96 ಬಿಲಿಯನ್ ಡಾಲರ್ (8 ಲಕ್ಷ ಕೋಟಿ ರೂ.ಗೂ ಹೆಚ್ಚು) ಕ್ರಿಪ್ಟೋಕರೆನ್ಸಿ ವಹಿವಾಟು ಮೂಲಕ ವರ್ಗಾವಣೆಗೆ ಮಾಡಿರುವ ಆರೋಪ ಬೆಸಿಯೊಕೊವ್ ಮೇಲಿದೆ.