ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಇದಾದ ಬಳಿಕ ಸುವರ್ಣ ಸೌಧಕ್ಕೆ ಲಕ್ಷ್ಮಿ ಹೆಬ್ಬಳ್ಕರ್ ಬೆಂಬಲಿಗರು ನುಗ್ಗಿ ದಾಂದಲೆ ಮಾಡಿದ್ದರು. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಸಿಟಿ ರವಿ ಅವರನ್ನು ಸುವರ್ಣ ಸೌಧದ ಗೇಟ್ ಬಳಿ ವಶಕ್ಕೂ ಪಡೆದುಕೊಂಡಿದ್ದರು. ಸದ್ಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಪಾಲರು ಸಿಎಂಗೆ ಪತ್ರ ಬರೆದಿದ್ದಾರೆ.
ಸಿಟಿ ರವಿ ಬಂಧನದ ಬಳಿಕ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾತ್ರಿ ಇಡೀ ಪೊಲೀಸರು ಅವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಿದ್ದಾರೆ ಎಂದು ಸಿಟಿ ರವಿ ಅವರು ಆರೋಪಿಸಿದ್ದಾರೆ. ಮಾತ್ರವಲ್ಲ ನನ್ನ ಹತ್ಯೆಗೆ ಪೊಲೀಸರು ಸಂಚು ನಡೆಸಿದ್ದರು ಎಂದು ಸ್ಫೋಟಕ ಆರೋಪ ಮಾಡಿದ್ದರು.
ಸಿಎಂ ರಾಜ್ಯಪಾಲರ ಪತ್ರ
ಸಿಟಿ ರವಿ ಅವರ ವಿರುದ್ಧ ಪೊಲೀಸರು ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹಾಗಾಗಿ ಪ್ರಕರಣದ ವಿವರಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ರ ಬರೆದಿದ್ದಾರೆ. ಸಿಟಿ ರವಿ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿಯ ಕುರಿತು ವಿವರಣೆ ನೀಡುವಂತೆಯೂ ಸಿಎಂಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯಲ್ಲಿ ಸಿಟಿ ರವಿ ಅವರನ್ನು ಬಂಧಿಸಿದ ಬಳಿಕ ಪೊಲೀಸರು ನಡೆದುಕೊಂಡ ನಡೆಯ ಕುರಿತು ಸಿಟಿ ರವಿ ಅವರು ಅನುಮಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಸರ್ಕಾರದ ವಿರುದ್ಧ ಎನ್ ಕೌಂಟರ್ ಆರೋಪ ಮಾಡಿ ಗವರ್ನರ್ ಗೆ ದೂರು ನೀಡಿದ್ದರು. ಸದ್ಯ ಸಿಟಿ ರವಿ ಅವರ ದೂರನ್ನು ಗಂಭೀರವಾಗಿ ತೆಗೆದುಕೊಂಡ ರಾಜ್ಯಪಾಲರು ಸಿಎಂ ಗೆ ಸೂಚನೆ ನೀಡಿದ್ದಾರೆ.