Sunday, October 1, 2023

Latest Posts

ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಿ.ಟಿ.ರವಿ

ಹೊಸದಿಗಂತ ವರದಿ,ಚಿಕ್ಕಮಗಳೂರು:

ಭದ್ರಾ ಉಪ ಕಣಿವೆಯಿಂದ ಜಿಲ್ಲೆಯ ಬಯಲಿನ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ೧೨೮೧ ಕೋಟಿ ರೂ. ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ.೨೨ ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಅವರು ಸೋಮವಾರ ತಾಲ್ಲೂಕಿನ ಕಳಾಸಪುರ ಗ್ರಾಮದಲ್ಲಿ ೧.೫೦ ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶಂಕುಸ್ಥಾಪನೆಗೆ ಮೂರು ಬಾರಿ ಮುಖ್ಯಮಂತ್ರಿಗಳ ದಿನಾಂಕ ನಿಗಧಿಯಾಗಿತ್ತು. ಆದರೆ ಕಾರಣಾಂತರಗಳಿಂದ ಅದು ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಹಂತದ ೪೦೦ ಕೋಟಿ ರೂ.ಗಳಿಗೆ ಮಂಜೂರಾತಿಯನ್ನೂ ಕೊಡಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಇದೀಗ ಮುಖ್ಯಮಂತ್ರಿಗಳು ಔಪಚಾರಿಕವಾಗಿ ಪೂಜೆಯನ್ನಷ್ಟೇ ಮಾಡಲಿದ್ದಾರೆ ಎಂದು ಹೇಳಿದರು.
ಭೈರಾಪುರ ಪಿಕ್‌ಅಪ್‌ನಿಂದ ದಾಸರಳ್ಳಿ ಮತ್ತು ಲಕ್ಯಾದ ಮಾದರಸನ ಕೆರೆ ತುಂಬಿಸುವ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಮುಂದಿನ ಒಂದು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಮತ್ತೊಂದಡೆ ರಣಘಟ್ಟದಿಂದ ನೀರು ಕೊಡಬೇಕು ಎನ್ನುವ ಯೋಜನೆಗೆ ಮಂಜೂರಾತಿ ದೊರಕಿಸಿ ಬೇಲೂರು ತಾಲ್ಲೂಕು ಹಗರೆ ಬಳಿ ಈಗಾಗಲೇ ಕೆಲಸ ಆರಂಭಿಸಲಾಗಿದೆ ಎಂದರು.
ಇದೀಗ ಕಳಸಾಪುರದ ೯೦೩ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲು ೧.೫೦ ಕೋಟಿ ರೂ. ವೆಚ್ಚದ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ. ಇದರ ಜಿತೆಯಲ್ಲಿ ಬೆಳವಾಡಿ ಕೆರೆ ಹಾಗೂ ಈಶ್ವರಳ್ಳಿ ಕೆರೆಗೆ ಯೋಜನೆಯಾಕಿಲ್ಲ ಎಂದು ಕೆಲವರು ಪ್ರಶ್ನಿಸಬಹುದು. ಇದಕ್ಕಾಗಿ ಸುಮಾರು ೧೪೦೦ ಕೋಟಿ ರೂ. ಯೋಜನೆಗೆ ನಮ್ಮ ಜಿಲ್ಲೆಯ ಮೂರೂ ತಾಲ್ಲೂಕುಗಳಿಗೆ ಮನೆ ಮನೆಗಳಿಗೆ ನೀರು ಕೊಡುವ ಯೋಜನೆಗೆ ಡಿಪಿಆರ್ ತಯಾರಾಗಿ ಕ್ಯಾಬಿನೆಟ್ ಮುಂದೆ ಸಧ್ಯದಲ್ಲೇ ಬರಲಿದೆ. ನಾನು ಅದರ ಬೆನ್ನತ್ತಿ ಕಾಡುತ್ತಿದ್ದೇನೆ. ಈಗಾಗಲೇ ನಬಾರ್ಡ್‌ನಿಂದ ಹಣವೂ ಮಂಜೂರಾಗಿದೆ. ಕ್ಯಾಬಿನೆಟ್‌ನಲ್ಲಿ ಪಾಸ್ ಆದಲ್ಲಿ ಮಾರ್ಚ್, ಏಪ್ರಿಲ್‌ನಲ್ಲಿ ಟೆಂಡರ್ ಕರೆಸುವ ಕೆಲಸ ಮಾಡುತ್ತೇವೆ ಎಂದರು.
ಇದಿಷ್ಟು ಆದಲ್ಲಿ ನಮ್ಮ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ನೀರು ಕೊಡಲು ಸಾಧ್ಯವಾಗುತ್ತದೆ. ಪ್ರಧಾನ ಮಂತ್ರಿಗಳ ಕನಸು ಮನೆ ಮನೆಗೆ ನೀರು ಕೊಡಬೇಕು ಎನ್ನುವುದು. ಈ ಹಿನ್ನೆಲೆಯಲ್ಲಿ ಯಾವ ಹಳ್ಳಿಯನ್ನೂ ಕೈಬಿಡುವುದಿಲ್ಲ ಎಂದರು.
ಕಳಸಾಪುರದ ಕಟ್ಟೆ ಶಿವಾಲಯ ಮತ್ತು ಚಲುವನಾರಾಯಣ ಸ್ವಾಮಿ ದೇವಾಲಯಗಳೆರಡರ ಅಭಿವೃದ್ಧಿಗೆ ಸಂಕಲ್ಪ ಮಾಡಿ ಕೈಹಾಕಿದ ಸಂದರ್ಭಕ್ಕೆ ಮಳೆಯೂ ಕೈ ಹಿಡಿಯಿತು. ಕರಗಡದಿಂದಲೂ ನೀರು ಹರಿಯಿತು ಕೆರೆಯೂ ತುಂಬಿತು ಎಂದರು.
ಕಳಸಾಪುರಕ್ಕೆ ಐಟಿಐ ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗ ತಾತ್ಕಾಲಿಕವಾಗಿ ಚಿಕ್ಕಮಗಳೂರಿನಲ್ಲಿ ತರಗತಿಗಳು ನಡೆಯುತ್ತಿವೆ. ಕಳಸಾಪುರಭಾಗ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವ ಕಾರಣಕ್ಕೆ ಐಟಿಐ ತರಲಾಗಿದೆ ಎಂದರು.
ಮಾಗಡಿಯಿಂದ ಕಳಸಾಪುರ ರಸ್ತೆ ಮತ್ತು ಗ್ರಾಮಾಂತರ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ೨೫ ಕೊಟಿ ರೂ. ಹಣ ಮಂಜೂರು ಮಾಡಿಸಲಾಗಿದೆ. ಟೆಂಡರ್ ಸಹ ಆಗಿದ್ದು ಕೆಲವೇ ದಿನದಲ್ಲಿ ಕೆಲಸ ಪ್ರಾರಂಭ ಆಗಲಿದೆ. ಬಸ್ ನಿಲ್ದಾಣ, ಆಟೋ ನಿಲ್ದಾಣ, ದೇವಸ್ಥಾನ ಜೀರ್ಣೋದ್ಧಾರ, ಜಲಜೀವನ್, ಕಾಂಕ್ರಿಟ್ ರಸ್ತೆ, ಸುವರ್ಣಗ್ರಾಮ, ಸಿಎಂ ಗ್ರಾಮ ವಿಕಾಸ್ ರಸ್ತೆ ಯಾವುದೇ ಯೋಜನೆ ಇಲ್ಲಿಗೆ ಬಂದಿದೆ ಎಂದರೆ ಸಿ.ಟಿ.ರವಿ ಹೆಸರನ್ನೇ ಹೇಳಬೇಕು. ಅವರು ನಮ್ಮ ವಿರೋಧಿಗಳೇ ಆಗಿದ್ದರೂ ಸರಿ ಅವರಿಗೆ ಬೇರೆ ದಾರಿಯಿಲ್ಲ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಈಶ್ವರಹಳ್ಳಿ ಮಹೇಶ್, ಜಿ.ಪಂ ಮಾಜಿ ಸದಸ್ಯ ರವೀಂದ್ರ ಬೆಳವಾಡಿ, ಎ.ಇಇ. ಜಯಪ್ರಕಾಶ್, ಸೇರಿದಂತೆ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!