ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು: ಇಂದಿನ ಪೀಳಿಗೆಗೆ ಧರ್ಮ ಶಿಕ್ಷಣ ನೀಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಧರ್ಮ ಆಚರಣೆಗೆ ಎಲ್ಲರೂ ಒತ್ತು ನೀಡಬೇಕು ಎಂದು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಮಹಾರಾಜ್ ಸ್ವಾಮೀಜಿ ಹೇಳಿದರು.
ನಗರದ ಮಾಧವ ಕೃಪಾ ಸಭಾಂಗಣದಲ್ಲಿ ವಿಕ್ರಮ ಹಾಗೂ ಹೊಸದಿಗಂತ ಡಿಜಿಟಲ್ ಸಂಯುಕ್ತಾಶ್ರಮದಲ್ಲಿ ಆಯೋಜನೆಗೊಂಡ ಸಾಂಸ್ಕೃತಿಕ ಸೊಬಗಿನ ಮೈಸೂರು ಕೈ ಹೊತ್ತಿಗೆ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಬಿಡುಗಡೆಗೊಂಡಿರುವ ಸಾಂಸ್ಕೃತಿಕ ಸೊಬಗಿನ ಮೈಸೂರು ಪುಸ್ತಕ ಸಾಕಷ್ಟು ಅತ್ಯಮೂಲ್ಯ ಹಾಗೂ ಅರ್ಥಪೂರ್ಣ ಮಾಹಿತಿಗಳನ್ನು ಒಳಗೊಂಡಿದೆ. ಭಾರತದ ಮೇಲೆ ಎಷ್ಟೇ ಆಕ್ರಮಣ ನಡೆದರೂ ನಮ್ಮ ಸಂಸ್ಕೃತಿಯ ಅಂತಃ ಶಕ್ತಿಯಿಂದ ದೇಶ ಉಳಿಸಿಕೊಂಡಿದ್ದೇವೆ. ಆಧ್ಯಾತ್ಮಿಕ ಶಕ್ತಿಯಿಂದ ಭಾರತ ಪ್ರಗತಿ ಹೊಂದುತ್ತಿದೆ. ಧರ್ಮ ಆಚರಣೆಯ ಮೂಲಕ ಅದರ ರಕ್ಷಣೆಯಾಗುತ್ತದೆ. ಹಿಂದೂ ಧರ್ಮದ ಜ್ಞಾನ, ಸಂಸ್ಕೃತಿಯ ಹಿರಿಮೆ ವ್ಯಾಪಿಕಸಬೇಕು. ಅಂದಾಗ ರಾಷ್ಟ್ರ ಸಶಕ್ತವಾಗುತ್ತದೆ ಎಂದು ಹೇಳಿದರು.
ಶಾಸಕ ಹಾಗೂ ಕೆಎಸ್ ಡಿಎಲ್ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ವಿಕ್ರಮ ಪತ್ರಿಕೆ ಉಳಿದೆಲ್ಲ ಪತ್ರಿಕೆಗಳಿಗಿಂತ ವಿಭಿನ್ನ. ವೈಚಾರಿಕ ಜ್ಞಾನ ವೃದ್ಧಿಸಲು ಶ್ರಮಿಸುತ್ತಿರುವ ವಿಕ್ರಮ ತಂಡದ ಕಾರ್ಯ ಶ್ಲಾಘನೀಯ. ನಮ್ಮ ದೇಶದಲ್ಲಿ ಅಸಂಖ್ಯಾತ ರಾಜರು, ಮಹಾಪುರುಷರು ಇನ್ನೂ ಅಜ್ಞಾತರಾಗಿಯೇ ಉಳಿದಿದ್ದಾರೆ. ಅವರ ಕುರಿತು ಹೆಚ್ಚಿನ ಜಾಗೃತಿ ವಿಕ್ರಮ ಮಾಧ್ಯಮದ ಮೂಲಕ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಆಡಳಿತ ಗದ್ದುಗೆ ಏರಲು ವಿಕ್ರಮ ಪತ್ರಿಕೆ ಅಳಿಲು ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಮ.ವೆಂಕಟರಾಮು, ಮೈಸೂರು ವಿಭಾಗ ಸಂಘಚಾಲಕ ಡಾ. ವಾಮನರಾವ್ ಬಾಪಟ್, ಡಾ. ವಿ. ರಂಗನಾಥ, ನಿವೇದಿತಾ ಇತರರು ಪಾಲ್ಗೊಂಡಿದ್ದರು.