ಹೊಸದಿಗಂತ ವರದಿ ಶಿವಮೊಗ್ಗ :
ಸಂಸದ ಡಿ.ಕೆ.ಸುರೇಶ್ ಜಿನ್ನಾ ಸಂಸ್ಕೃತಿಯವರು. ಇದರಿಂದಾಗಿಯೇ ಉತ್ತರ ಹಾಗೂ ದಕ್ಷಿಣ ಭಾರತ ಎಂದು ಒಡೆದು ಆಳುವಂತಹ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಮ್ಮನ ಹೇಳಿಕೆಯನ್ನು ಅಣ್ಣ ಡಿ.ಕೆ.ಶಿವಕುಮಾರ್ ಸ್ವಾಗತಿಸಿದ್ದಾರೆ. ಇವರಿಬ್ಬರೂ ಜಿನ್ನಾ ಸಂಸ್ಕೃತಿಯ ಮನಸ್ಥಿತಿಯವರೇ ಆಗಿದ್ದಾರೆ. ಆದರೆ ಸಿದ್ದರಾಮಯ್ಯನವರು ಸುರೇಶ್ ಹೇಳಿಕೆ ಒಪ್ಪುವುದಿಲ್ಲ ಎಂದು ಹೇಳಿರುವುದು ಸ್ವಾಗತಾರ್ಹ ಎಂದರು.
ಕಾಂಗ್ರೆಸ್ ನಾಯಕರಾದ ಮಲ್ಲಿ ಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿಯವರು ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಿದ ಅವರು, ಅನುದಾನ ಸಾಕಾಗಿಲ್ಲವೆಂದರೆ ಅದನ್ನು ಸಂಸತ್ತಿನಲ್ಲಿ ಚರ್ಚೆ ಮಾಡುವುದು ಬಿಟ್ಟು ದೇಶ ಒಡೆಯುವಂತಹ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ನಿರ್ಮಲ ಸೀತಾರಾಮನ್ ಜನಸಾಮಾನ್ಯರಿಗೆ ಬೇಕಾದ ಅನುಕೂಲಗಳನ್ನು ಆಯವ್ಯಯದಲ್ಲಿ ಕಲ್ಪಿಸಿದ್ದಾರೆ. ವಸತಿ, ವಿದ್ಯುತ್, ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. ರೈತರು,ಮಹಿಳೆಯರು, ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿರುವ ಉತ್ತಮ ಬಜೆಟ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ೮ ತಿಂಗಳಾದರೂ ರಸ್ತೆಯಲ್ಲಾದ ಗುಂಡಿಗಳಿಗೆ ಒಂದು ಬುಟ್ಟಿ ಮಣ್ಣು ಹಾಕಲು ಇವರಿಗೆ ಆಗಿಲ್ಲ. ಬಿಜೆಪಿ ಆರಂಭಿಸಿದ ಕೆಲಸಗಳನ್ನು ವಾಪಸ್ ಪಡೆಯುತ್ತಿದ್ದಾರೆ. ಇದೇ ರೀತಿ ಉಚಿತಗಳನ್ನು ಮುಂದುವರಿಸಿದರೆ ಸಿದ್ದರಾಮಯ್ಯನವರು ಆರ್ಥಿಕವಾಗಿ ಬೆತ್ತಲಾಗುತ್ತಾರೆಂದು ಹರಿಹಾಯ್ದರು.