ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಶಸ್ ಸರಣಿಯ ಎರಡನೇ ಪಂದ್ಯಕ್ಕಾಗಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಕೇವಲ ಎರಡು ದಿನಗಳಲ್ಲಿ ಹೀನಾಯ ಸೋಲುಣಿಸಿ ಭರ್ಜರಿ ಆರಂಭ ಕಂಡಿರುವ ಆಸ್ಟ್ರೇಲಿಯಾ, ವಿಜಯೀ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಬ್ರಿಸ್ಬೇನ್‌ಗೆ ಪ್ರಯಾಣ ಬೆಳೆಸಿದೆ.
ಇದರರ್ಥ, ಮೊದಲ ಟೆಸ್ಟ್‌ನಲ್ಲಿ ಆಡದಿದ್ದ ಸ್ಟಾರ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಗಬ್ಬಾದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಿಂದಲೂ ಹೊರಗುಳಿಯಲಿದ್ದಾರೆ. ಕಮ್ಮಿನ್ಸ್ ಗೈರು ಹಾಜರಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಟೀವ್ ಸ್ಮಿತ್ ಮತ್ತೊಮ್ಮೆ ನಾಯಕನ ಜವಾಬ್ದಾರಿಯನ್ನು ಹೊರಲಿದ್ದಾರೆ.
ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಪ್ಯಾಟ್ ಕಮ್ಮಿನ್ಸ್ ಅವರು ನಿಯಮಿತವಾಗಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದ್ದರೂ, ಆಯ್ಕೆದಾರರು ಅವರಿಗೆ ಮತ್ತೊಂದು ಪಂದ್ಯಕ್ಕೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ, ಡಿಸೆಂಬರ್ 4 ರಂದು ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತನ್ನ ಸ್ಟಾರ್ ನಾಯಕನಿಲ್ಲದೆ ಆಡಲಿದೆ.
ಕಮ್ಮಿನ್ಸ್ ಜೊತೆಗೆ, ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಸಹ ಸಂಪೂರ್ಣ ಫಿಟ್ ಆಗದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ, ಮೊದಲ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಓಪನರ್ ಉಸ್ಮಾನ್ ಖವಾಜಾ ಅವರು ತಂಡದಲ್ಲಿಯೇ ಮುಂದುವರಿದಿದ್ದಾರೆ. ಪರ್ತ್ ಟೆಸ್ಟ್‌ನಿಂದ ಆಯ್ಕೆಯಾದ 14 ಆಟಗಾರರನ್ನೇ ಬ್ರಿಸ್ಬೇನ್‌ಗೆ ಆಯ್ಕೆ ಮಾಡಲಾಗಿದೆ.
ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 4 ರಂದು ಬ್ರಿಸ್ಬೇನ್‌ನ ಗಬ್ಬಾ ಅಂಗಳದಲ್ಲಿ ಆರಂಭವಾಗಲಿದೆ. ಈ ಪಿಂಕ್ ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಬಲಿಷ್ಠ ಆಸ್ಟ್ರೇಲಿಯಾಕ್ಕೆ ಯಾವ ರೀತಿ ಪ್ರತಿತಂತ್ರ ರೂಪಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಎರಡನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ:
ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖವಾಜಾ, ಜೇಕ್ ವೆದರಾಲ್ಡ್, ಮಾರ್ನಸ್ ಲಬುಶೇನ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಬ್ಯೂ ವೆಬ್‌ಸ್ಟರ್, ಮಿಚೆಲ್ ಸ್ಟಾರ್ಕ್, ಅಲೆಕ್ಸ್ ಕ್ಯಾರಿ, ಬ್ರಾಂಡನ್ ಡಾಗೆಟ್, ಮೈಕೆಲ್ ನೇಸರ್, ನಾಥನ್ ಲಿಯಾನ್ ಮತ್ತು ಸ್ಕಾಟ್ ಬೋಲ್ಯಾಂಡ್.

