ತ್ರಿವೇಣಿ ಗಂಗಾಧರಪ್ಪ
ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ಕೆಲಸ ಮಾಡಿದ ಮೇಲೆ ಗಳಿಸುವ ಹಣದಲ್ಲಿ ಒಂದು ರೂಪಾಯಿಯೂ ಉಳಿಸದಿದ್ದರೆ ಇದೆಂಥಾ ಜೀವನ. ದುಡಿಯುವ ಎಲ್ಲವನ್ನು ಅನವಶ್ಯಕ ವಿಚಾರಗಳಿಗೆ ಖರ್ಚು ಮಾಡಿದರೆ ಮುಂದಿನ ಪರಿಸ್ಥಿತಿ ತೀರಾ ಶೋಚನೀಯವಾಗಿರುತ್ತದೆ. ಅದು ಬ್ಯಾಚುಲರ್ ಜೀವನ ಆಗಿರಬಹುದು ಅಥವಾ ಕುಟುಂಬ ಹೊಂದಿರುವ ವ್ಯಕ್ತಿಯೂ ಆಗಿರಬಹುದು. ಹಣ ನಿರ್ವಹಣೆ ಗೊತ್ತಿಲ್ಲದಿದ್ದರೆ ಮತ್ತೊಬ್ಬರ ಬಳಿ ಕೈ ಚಾಚಬೇಕಾದೀತು ಜೋಕೆ!.
ಅನವಶ್ಯಕ ವಿಷಯಗಳಿಗೆ ಸಂಬಳವನ್ನು ಪೋಲು ಮಾಡಿ ಮತ್ತೊಬ್ಬರ ಬಳಿ ಸಹಾಯ ಮಾಡಿ ಎಂದು ಕೇಳುವುದು ಜೀವನ ಚಕ್ರದಂತೆ ಅಭ್ಯಾಸವಾಗುತ್ತದೆ. ಹಾಗಾಗಿ ಉಳಿತಾಯ ಮಾಡದೇ ಹಣ ಖರ್ಚು ಮಾಡುವುದು ಒಳ್ಳೆಯದಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬರೂ ಪರ್ಸನಲ್ ಬಜೆಟ್ ರೂಪಿಸಿಕೊಳ್ಳಬೇಕು.
ಮೊದಲು ನಿಮ್ಮ ತಿಂಗಳ ಸಂಬಳ ಎಷ್ಟೆಂದು ಬರೆದಿಟ್ಟುಕೊಳ್ಳಿ ಅದರಲ್ಲಿ ನಿಮ್ಮ ದೈನಂದಿನ ವೆಚ್ಚಗಳ ಡೇಟಾ ಪರಿಶೀಲಿಸಿ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ತಿಂಡಿ ಮತ್ತು ರಾತ್ರಿಯ ಊಟಕ್ಕೆ ಪ್ರತ್ಯೇಕವಾಗಿ ಇಷ್ಟು ಎಂದು ಪರಿಶೀಲಿಸಿ. ನಿಮ್ಮ ದಿನನಿತ್ಯ ವಸ್ತುಗಳ ಬೆಲೆಯನ್ನು ಸಹ ಲೆಕ್ಕ ಹಾಕಿ. ಜೊತೆಗೆ ಮಕ್ಕಳಿದ್ದರೆ ಅವರ ಖರ್ಚು-ವೆಚ್ಚ ಎಲ್ಲವನ್ನು ಸರಿಯಾದ ಅಂಕಿ ಅಂಶಗಳೊಂದಿಗೆ ಅಂದಾಜಿಸಿ.
ನಿಮ್ಮ ಬಜೆಟ್ನಲ್ಲಿ ನೀವು ವಾಸ್ತವಾಂಶಗಳನ್ನು ಹೊಂದಿಲ್ಲದಿದ್ದರೆ, ಅದನ್ನು ಅನುಸರಿಸಲು ಸಾಧ್ಯವಿಲ್ಲ. ನೀವು 40 ರೂಪಾಯಿಗೆ ಸಮೋಸಾ ಖರೀದಿಸಿದರೆ.. ಅದನ್ನೂ ನಿಮ್ಮ ಖರ್ಚಿನಲ್ಲಿ ಬರೆಯಿರಿ. ಸಿನಿಮಾಗೆ ಹೋಗುತ್ತೀರಾ? ಟಿಕೆಟ್ ಬೆಲೆಯನ್ನು ಸಹ ಬರೆಯಿರಿ. ಖರೀದಿಸುವ ಪ್ರತಿಯೊಂದು ವಸ್ತುವನ್ನು ಪಟ್ಟಿ ಮಾಡಿ. ವಿವೇಚನೆಯಿಲ್ಲದ ಖರ್ಚಿನಿಂದ ಪ್ರತಿ ವರ್ಷ ಸಾವಿರಾರು ರೂಪಾಯಿ ವ್ಯರ್ಥ ಮಾಡುತ್ತಿದ್ದೀರಿ ಎಂಬುದು ಆಗ ನಿಮಗರಿವಾಗುತ್ತದೆ. ಕೂಡಲೇ ಎಲ್ಲೆಲ್ಲಿ ನಿಮ್ಮ ಹಣ ಉಳಿಸಬಹುದೆಂಬ ಜ್ಞಾನ ನಿಮಗೇ ತಿಳಿಯುತ್ತದೆ.
ಈಗ ನೋಡಿ ನಿಮ್ಮ ಸಂಬಳದ ಹಣ ಇನ್ನೂ ಉಳಿದಿದೆಯೇ ಅಂತ. ಹಣವಿದ್ದರೆ ಅದನ್ನು ನಿಮ್ಮ ಉಳಿತಾಯದ ಅಡಿಯಲ್ಲಿ ಪರಿಗಣಿಸಿ. ಸಾಧ್ಯವಾದರೆ, ಅಂಚೆ ಕಚೇರಿ ಅಥವಾ ಬ್ಯಾಂಕ್ಗಳಲ್ಲಿ ಮಾಸಿಕ ಠೇವಣಿ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ.
ಆರೋಗ್ಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿನಿತ್ಯ ಆರೋಗ್ಯಕರ ಆಹಾರ ತಿನ್ನಲು ಹಣದ ಬಗ್ಗೆ ಯೋಚಿಸಬೇಡಿ ಕಡಿಮೆ ಹಣಕ್ಕೆ ಹೆಚ್ಚಿನ ಪ್ರೊಟೀನ್ ಆಹಾರವನ್ನು ಒದಗಿಸುವ ಅನೇಕ ವಸ್ತುಗಳು ಇವೆ. ಅವುಗಳ ಮೇಲೆ ಗಮನಹರಿಸಿ. ಪ್ರತಿದಿನ ಬಿರಿಯಾನಿ, ಪಿಜಾ, ಬರ್ಗರ್, ಜಂಕ್ ಫುಡ್, ಮದ್ಯಪಾನ, ಧೂಮಪಾನ, ಪಬ್, ಪಾರ್ಟಿ ಇವೆಲ್ಲವೂ ಅನವಶ್ಯಕವಾದವುಗಳೇ…ನಿಮ್ಮ ಟೈಮ್ ಲಿಮಿಟ್ನಲ್ಲಿ ಎಲ್ಲವೂ ಇದ್ದರೆ ಆರೋಗ್ಯ/ಜೀವನ ಎರಡೂ ಸುಖಕರ, ಯೋಚಿಸಿ.
ಉಳಿತಾಯದ ಜೊತೆಗೆ ಆರೋಗ್ಯ ವಿಮೆಗಾಗಿ ನಿಮ್ಮ ಬಜೆಟ್ನಲ್ಲಿರಲಿ, ಭವಿಷ್ಯದಲ್ಲಿ ಅದು ಹೆಚ್ಚು ಉಪಯುಕ್ತವಾಗಿರುತ್ತದೆ.
ಹಾಗಂತ ಎಲ್ಲದರಲ್ಲೂ ಉಳಿತಾಯದ ಜೀವನ ನಡೆಸಬೇಕಾಗಿಲ್ಲ ನಿಮ್ಮ ಹಣವನ್ನು ನೀವು ಸಂತೋಷಕ್ಕಾಗಿ ಖರ್ಚು ಮಾಡಬಹುದು. ಆದರೆ ಆ ಎಂಜಾಯ್ಮೆಂಟ್ ದಿನವೂ ಬೇಡ. ಹಣ ನೀರಿನ ಹಾಗೆ ಬಹಳ ಬೇಗ ಚಟಗಳೆಂಬ ಬೇಗೆಗೆ ಆವಿಯಾಗುತ್ತದೆ ನೆನೆಪಿರಲಿ. ಅದಕ್ಕಾಗಿಯೇ ವೈಯಕ್ತಿಕ ಬಜೆಟ್ ಯೋಜನೆಯು ಅತ್ಯಗತ್ಯವಾಗಿ ಬೇಕು.