ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯದ ಜನರಿಗೆ ಕರೆಂಟ್ ಶಾಕ್ ಆಗಿದ್ದು, ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ KERC ಆದೇಶ ನೀಡಿದ್ದು, ಏಪ್ರಿಲ್ 1ರಿಂದ ರಾಜ್ಯಾದ್ಯಂತ ಹೊಸ ದರ ಜಾರಿಗೆ ಬರಲಿದೆ.
ರಾಜ್ಯದ ವಿದ್ಯುತ್ ಬಳಕೆದಾರರಿಗೆ ಶೀಘ್ರದಲ್ಲೇ ದರ ಏರಿಕೆಯ ಶಾಕ್ ಕೊಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ನಿರ್ಧರಿಸಿದೆ. 2025-26ನೇ ಸಾಲಿನಲ್ಲಿ 36 ಪೈಸೆ, 2026-27ನೇ ಸಾಲಿಗೆ 35 ಪೈಸೆ ಮತ್ತು 2027-28ಕ್ಕೆ 34 ಪೈಸೆ ಏರಿಕೆ ಮಾಡಲು ತೀರ್ಮಾನಿಸಿದೆ. ದರ ಹೆಚ್ಚಳದಿಂದ ಈ 3 ವರ್ಷದಲ್ಲಿ 8 ಸಾವಿರದ 519 ಕೋಟಿ ರೂಪಾಯಿ ವಸೂಲಿ ಮಾಡಲು ಮುಂದಾಗಿದೆ.
ಕೆಲ ದಿನದ ಹಿಂದೆ ವಿದ್ಯುತ್ ನಿರ್ವಹಣಾ ವೆಚ್ಚಕ್ಕಾಗಿ (KPTCL) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ದರ ಏರಿಕೆ ಮಾಡಿತ್ತು. ಇದೀಗ ವಿದ್ಯುತ್ ಪ್ರಸರಣ & ಸರಬರಾಜು ಸಂಸ್ಥೆಗಳ ಸಿಬ್ಬಂದಿ ಪಿಂಚಣಿ, ಗ್ರಾಚ್ಯುಟಿ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ.ಸರ್ಕಾರದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸುವಂತೆ KPTCLನಿಂದ ಅರ್ಜಿ ಸಲ್ಲಿಕೆಯಾಗಿತ್ತು. ಎಸ್ಕಾಂಗಳು ಸಲ್ಲಿಸಿದ್ದ ಅರ್ಜಿಯನ್ನು KERC ಪುರಸ್ಕಾರ ಮಾಡಿದೆ.
ಇದೇ ವಿಚಾರವಾಗಿ (FKCCI) ಕರ್ನಾಟಕ ವಾಣಿಜ್ಯ & ಕೈಗಾರಿಕಾ ಮಹಾ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು. ಸರ್ಕಾರ ಭರಿಸಬೇಕಿದ್ದ ಪಿಂಚಣಿ & ಗ್ರಾಚ್ಯುಟಿ ಹಣವನ್ನು ಗ್ರಾಹಕರಿಗೆ ವರ್ಗಾಯಿಸೋದು ಸರಿಯಲ್ಲ ಎಂದು . ಆದ್ರೆ, 2024ರ ಮಾರ್ಚ್ 25ರಂದು FKCCI ಅರ್ಜಿಯನ್ನು ಹೈಕೋರ್ಟ್ ತಿರಸ್ಕಾರ ಮಾಡಿತ್ತು.
ಅರ್ಜಿ ತಿರಸ್ಕಾರಗೊಂಡ ಬೆನ್ನಲ್ಲೇ ಎಸ್ಕಾಂ & KPTCLನಿಂದ KERCಗೆ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಮನವಿ ಮಾಡಿತ್ತು. ಈ ಅರ್ಜಿಯನ್ನ ಪುರಸ್ಕರಿಸಿರುವ KERC ಏಪ್ರಿಲ್ 1ರಿಂದ ಪ್ರತಿ ಯೂನಿಟ್‌ಗೆ 36 ಪೈಸೆ ಏರಿಕೆ ಮಾಡಲು ಆದೇಶ ನೀಡಿದೆ.
ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ
ಏಪ್ರಿಲ್ 1ರಿಂದ ಕರೆಂಟ್ ಬಿಲ್ ಹೆಚ್ಚಳ ಮಾಡುವ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್, ಮೆಟ್ರೋ, ಎಲ್ಲದರ ದರ ಹೆಚ್ಚಾಯ್ತು. ಹೀಗೆ ಒಂದೊಂದೇ ರೇಟ್ ಹೆಚ್ಚು ಮಾಡಿದ್ರೆ ಹೇಗೆ? ತನ್ನ ಸಿಬ್ಬಂದಿಗೆ ಹಣ ಕೊಡಲು ಬಡ ಜನರಿಂದ ವಸೂಲಿ ಮಾಡೋದು ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ.