ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯುವತಿಯ ಸ್ನೇಹಿತನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಸೀಮಾಪುರಿ ಸುಂದರ್ ನಗರದ ನಿವಾಸಿ ಕೋಮಲ್ ಕೊಲೆಯಾದ ಯುವತಿ. ಆಕೆಯ ಆಪ್ತ ಸ್ನೇಹಿತ ಆಸಿಫ್ ಕೊಲೆ ಮಾಡಿರುವ ಆರೋಪಿ.
ಟ್ಯಾಕ್ಸಿ ಚಾಲಕನಾಗಿದ್ದ ಆಸಿಫ್ ಮಾ. 12ರಂದು ಸೀಮಾಪುರಿಯಿಂದ ಕಾರಿನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಆಸಿಫ್, ಯುವತಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಆಕೆಯ ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಶವ ಕೊಳೆತಿದ್ದರಿಂದ ಮಾ. 17ರಂದು ಕಾಲುವೆಯಲ್ಲಿ ತೇಲುತ್ತಿತ್ತು. ಇದನ್ನೂ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಯುವತಿ ನಾಪತ್ತೆಯಾದ ದಿನದಂದು ಆಕೆಯ ಮನೆಯವರು ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಆರೋಪಿ ಆಸಿಫ್‌ನನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡಿಸಿಕೊಂಡಿದ್ದೇವೆ. ಕೊಲೆಯ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.