ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿ ಜಿಲ್ಲೆಯ ಮೋರಿ ಪ್ರದೇಶದ ಸಾಲ್ರಾ ಗ್ರಾಮದಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ವ್ಯಕ್ತಿಯೊಬ್ಬನ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿರುವುದಾಗಿ ಪಿಟಿಐ ವರದಿ ಮಾಡಿದೆ. ಜನವರಿ 9 ರಂದು ಬೈನೋಲ್ ಗ್ರಾಮದ ನಿವಾಸಿ 22 ವರ್ಷದ ಆಯುಷ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದೇವಸ್ಥಾನದಲ್ಲಿ ಮೇಲ್ವರ್ಗದ ಕೆಲವರು ಆತನ ಮೇಲೆ ಹಲ್ಲೆ ನಡೆಸಿ, ಕಟ್ಟಿಹಾಕಿ ರಾತ್ರಿಯಿಡೀ ಸುಡುವ ಕೋಲುಗಳಿಂದ ಥಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಯುಷ್ ಅವರನ್ನು ಜನವರಿ 10 ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಉನ್ನತ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯುಷ್ ನೀಡಿದ ದೂರಿನ ಆಧಾರದ ಮೇಲೆ, ಘಟನೆಗೆ ಸಂಬಂಧಿಸಿದಂತೆ ಐವರು ಗ್ರಾಮಸ್ಥರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ತಿಳಿಸಿದ್ದಾರೆ.
ಸರ್ಕಲ್ ಆಫೀಸರ್ (ಕಾರ್ಯಾಚರಣೆ) ಪ್ರಶಾಂತ್ ಕುಮಾರ್‌ಗೆ ಈ ಕೇಸ್ ತನಿಖೆಯ ಹೊಣೆ ನೀಡಲಾಗಿದೆ ಎಂದರು.