ದಲಿತ ಮಹಿಳೆ ಕೊಲೆ ಪ್ರಕರಣ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2019ರಲ್ಲಿ ನಡೆದ ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಸತ್ರ ನ್ಯಾಯಾಲಯವು 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತುಮಕೂರಿನ 3ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಆರೋಪಿಗಳು ದೋಷಿ ಎಂದು ಕೋರ್ಟ್ ಆದೇಶಿಸಿತ್ತು. ಇದೀಗ ಕೋರ್ಟ್ 21 ಮಂದಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದು, ಒಟ್ಟು 2,83,200 ರೂ. ದಂಡ ವಿಧಿಸಿದೆ. ಅಂದರೆ ತಲಾ ಒಬ್ಬರಿಗೆ 13,500 ದಂಡ ವಿಧಿಸಿದೆ.

ಒಟ್ಟು 21 ದೋಷಿಗಳ ಪೈಕಿ ಇಬ್ಬರು ಮಹಿಳೆಯರು, 19 ಜನ ಪುರುಷರಿದ್ದಾರೆ. ಆಗಿನ ಡಿವೈಎಸ್‌ಪಿ ಶಿವರುದ್ರಸ್ವಾಮಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ತುಮಕೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ನಾಗಿರೆಡ್ಡಿ ಆದೇಶ ಹೊರಡಿಸಿದ್ದಾರೆ.

ಘಟನೆ ಏನು?
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2019ರ ಜೂನ್ 20ರಂದು ಹೊನ್ನಮ್ಮ ಎಂಬ ದಲಿತ ಮಹಿಳೆಯ ಕೊಲೆ ನಡೆದಿತ್ತು. ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಈ ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ಹೊನ್ನಮ್ಮ ದೂರು ನೀಡಿದ್ದರು. ಇದರಿಂದ ಗ್ರಾಮಸ್ಥರು ಹಾಗೂ ಹೊನ್ನಮ್ಮ ಮಧ್ಯೆ ದ್ವೇಷ ಉಂಟಾಗಿ ಜಗಳ ನಡೆಯುತ್ತಿತ್ತು. ಕೊನೆಗೆ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಆರೋಪಿಗಳ ವಿರುದ್ಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಜಾತಿನಿಂದನೆ ಕೇಸ್ ದಾಖಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!