ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಿದ ಕಾರಣಕ್ಕೆ 24ರ ಹರೆಯದ ದಲಿತ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಶನಿವಾರ ಏಳು ಮಂದಿಯನ್ನು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬೋಂಧರ್ ಹವೇಲಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ಹತ್ಯೆಯಾದ ಯುವಕನನ್ನು ಅಕ್ಷಯ್ ಭಲೇರಾವ್ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಆರೋಪಿಗಳು ಮೇಲ್ಜಾತಿ ಸಮುದಾಯದ ವ್ಯಕ್ತಿಯೊಬ್ಬರ ವಿವಾಹವನ್ನು ಆಚರಿಸುತ್ತಿದ್ದಾಗ ಅಕ್ಷಯ್ ಭಲೇರಾವ್ ಹೋಗುತ್ತಿದ್ದ. ಈ ವೇಳೆ ಭಲೇರಾವ್ ಮತ್ತು ಈತನ ಸಹೋದರ ಆಕಾಶ್ ನನ್ನು ಕಂಡ ಆರೋಪಿಗಳು, ಅಂಬೇಡ್ಕರ್ ಜಯಂತಿ ಆಚರಿಸಿದ ಇಬ್ಬರಲ್ಲಿ ಒಬ್ಬನನ್ನು ಕೊಲ್ಲಬೇಕು ಎಂಬ ನಿರ್ಧಾರ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವಿಚಾರದಲ್ಲಿ ಆರೋಪಿಗಳು ಮತ್ತು ಅಕ್ಷಯ್, ಆಕಾಶ್ ನಡುವೆ ಮಾತಿನ ಚಕಮಕಿ ಆರಂಭಗೊಂಡು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಅಕ್ಷಯ್ ಭಲೇರಾವ್ನಿಗೆ ಥಳಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಆಕಾಶ್ ಮೇಲೂ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್, ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆಯಡಿ ಕೊಲೆ, ಕೊಲೆ ಯತ್ನ, ಗಲಭೆ ಮತ್ತು ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.