ಮಳೆಯಿಂದ ಹಾನಿ : ರೈತರ ಖಾತೆಗೆ ಪರಿಹಾರ ಹಣ ವರ್ಗಾವಣೆ ಎಂದ ಸಚಿವ ಕೃಷ್ಣಬೈರೇ ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯಕ್ಕೆ ಇನ್ನೇನು ಮುಂಗಾರು ಪ್ರವೇಶ ಮಾಡಲಿದ್ದು,ಇದರ ಮುನ್ನವೇ ರಾಜ್ಯಾದ್ಯಂತ ಮಳೆ ಅಬ್ಬರ ಶುರುವಾಗಿದೆ. ಹಲವೆಡೆ ಗಾಳಿಮಳೆಗೆ ಆಸ್ತಿಪಾಸ್ತಿ ಹಾನಿ ಆಗಿದ್ದರೆ, ಸಿಡಿಲಿನಿಂದಾಗಿ ಜೀವಹಾನಿಯೂ ಸಂಭವಿಸಿದೆ.

ಈ ನಡುವೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿ, ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಹೆಚ್ಚಿನ ಹಾನಿಯಾಗಿರುವುದರಿಂದ ಪರಿಹಾರ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳು, ಎಸ್​​ಡಿಆರ್​ಎಫ್​, ಎನ್​ಡಿಆರ್​ಎಫ್​ ಹಾಗೂ ಹವಾಮಾನ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕೆಲವು ತೀರ್ಮಾನ ತೆಗೆದುಕೊಂಡು ಸೂಚನೆ ನೀಡಿದ್ದೇನೆ ಎಂದರು.

ಮಾರ್ಚ್, ಮೇ ತಿಂಗಳಲ್ಲಿ ಕೆಲವು ಭಾಗದಲ್ಲಿ ಹೆಚ್ಚಿನ ಮಳೆ ಆಗಿದೆ. ಜನವರಿಯಿಂದ ಇಲ್ಲಿಯವರೆಗೆ 65 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 59 ಮಂದಿಗೆ ಪರಿಹಾರ ಹಣ ನೀಡಿದ್ದೇವೆ. 487 ಜಾನುವಾರುಗಳು ಮೃತಪಟ್ಟಿದ್ದು, ಆ ಬಗ್ಗೆಯೂ ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆ. ಮನೆಗಳೂ ಹಾನಿಗೀಡಾಗಿದ್ದು, 1400 ಮನೆಗಳಿಗೆ ಸಣ್ಣಮಟ್ಟದ ಹಾನಿಯಾಗಿದೆ. ಜನವರಿಯಿಂದ ಇಲ್ಲಿಯವರೆಗೂ 20,160 ಹೆಕ್ಟೇರ್​ ಬೆಳೆ ಹಾನಿಯಾಗಿದೆ ಎಂಬ ವಿವರಣೆಗಳನ್ನು ನೀಡಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ 538 ಕೋಟಿ ರೂ. ಲಭ್ಯವಿದೆ. ಒಂದೆರಡು ಜಿಲ್ಲೆಯಲ್ಲಿ ಹೆಚ್ಚಿನ ಹಣ ಬೇಕೆಂದು ಮನವಿ ಮಾಡಿದ್ದಾರೆ, ಅದನ್ನೂ ಒದಗಿಸುತ್ತೇವೆ ಎಂದ ಸಚಿವರು, ಬೆಳೆಹಾನಿ ಸಂಬಂಧ ರೈತರ ಖಾತೆಗೆ ಪರಿಹಾರ ಹಣ ವರ್ಗಾವಣೆ ಆಗಲಿದೆ ಎಂದರು.

ಪ್ರಾಣಹಾನಿ ಪರಿಹಾರ ಎರಡು ದಿನದಲ್ಲಿ ವಿತರಿಸಬೇಕು. ಮಳೆಯಿಂದ ಬೆಳೆಹಾನಿ ಸಂಬಂಧ ಎಲ್ಲ ಅಧಿಕಾರಿಗಳು ಕೂಡಲೇ ಅಪ್​ಡೇಟ್​ ಮಾಡಬೇಕೆಂದು ಸೂಚನೆ ನೀಡಿದ್ದಾಗಿಯೂ ತಿಳಿಸಿದರು.

ಕೊಡಗು, ಮಂಗಳೂರು, ಬೆಳಗಾವಿ, ರಾಯಚೂರು ಭಾಗಗಳಲ್ಲಿ ವಿಪತ್ತು ನಿರ್ವಹಣಾ ತಂಡ ಸಜ್ಜಾಗಿರುವಂತೆ ಸೂಚಿಸಿದ್ದೇವೆ. ಅನಾಹುತ ಆದ ತಕ್ಷಣ ಪರಿಹಾರ ಕ್ರಮಕ್ಕೆ ಮುಂದಾಗುವಂತೆ ನಿರ್ದೇಶನ ನೀಡಿದ್ದೇವೆ. ಇತ್ತೀಚಿಗೆ ಸಿಡಿಲಿನಿಂದಾಗಿ ಪ್ರಾಣಹಾನಿ ಸಂಭವ ಹೆಚ್ಚಾಗಿದೆ, ಆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪ್ರಕೃತಿ ವಿಕೋಪ ಪ್ರಕರಣ ಎದುರಿಸಲು ಆಡಳಿತ ಸಜ್ಜಾಗುವಂತೆ ಅಧಿಕಾರಿಗಳಿಗೆ ಹೇಳಿದ್ದಾಗಿ ಅವರು ತಿಳಿಸಿದರು.

ಇನ್ನೆರಡು ದಿನಗಳಲ್ಲಿ ಕುಷ್ಕಿ ಬೆಳೆ, ತೋಟಗಾರಿಕೆ ಬೆಳೆ ಹಾನಿ ಎಷ್ಟು ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ. ಪರಿಹಾರ ವಿತರಣೆಯಲ್ಲಿ ಕೆಲವು ಕಡೆ ದುರ್ಬಳಕೆ ಆಗಿದೆ ಎಂಬ ದೂರುಗಳೂ ಇವೆ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ಮಾಡಿದ್ದೇವೆ ಎಂಬ ಮಾಹಿತಿಯನ್ನೂ ಸಚಿವರು ಹಂಚಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!