ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಗನಚುಂಬಿ ಕಟ್ಟಡಗಳ ಮೇಲಿನ ಸಾಹಸಗಳಿಗೆ ಹೆಸರುವಾಸಿಯಾದ ಫ್ರೆಂಚ್ ಡೇರ್‌ಡೆವಿಲ್ ರೆಮಿ ಲುಸಿಡಿ ಹಾಂಗ್ ಕಾಂಗ್‌ನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಸ್ಟಂಟ್ ಮಾಡುವ ಉದ್ದೇಶದಿಂದ ಕಟ್ಟಡ ಏರಿದ್ದು, ಈ ಅನುಕ್ರಮದಲ್ಲಿ ಕಾಲುಜಾರಿ 68ನೇ ಮಹಡಿಯಿಂದ ಜಾರಿ ಬಿದ್ದರು.
ಕಟ್ಟಡದ ಬಳಿ ಬಂದ ಲುಸಿಡಿ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಭದ್ರತಾ ಸಿಬ್ಬಂದಿಗೆ ಸುಳ್ಳು ಹೇಳಿ ಒಳಗೆ ಬಂದಿದ್ದಾರೆ. ಭದ್ರತಾ ಸಿಬ್ಬಂದಿ ತನಿಖೆ ನಡೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದ್ದು, ಅಷ್ಟೊತ್ತಿಗಾಗಲೇ ಲುಸಿಡಿ ಕಟ್ಟಡ ಏರುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.
ಟ್ರೆಗುಂಟರ್ ಟವರ್ ಕಾಂಪ್ಲೆಕ್ಸ್‌ನ ಮೇಲಕ್ಕೆ ಲುಸಿಡಿ ಏಣಿ ಏರುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಅದಾದ ಬಳಿಕ ಲುಸಿಡಿ ಕೊನೆಯ ಬಾರಿಗೆ ರಾತ್ರಿ 7.30 ಕ್ಕೆ ಕಿಟಕಿಯ ಬಾಗಿಲತ್ತ ತನ್ನ ಕೈಯನ್ನು ಬಡಿಯುತ್ತಿದ್ದ ವಿಚಾರ ಕೆಲಸಕ್ಕೆ ಬಂದಿದ್ದ ಮಹಿಳೆಯಿಂದ ಪೊಲೀಸರು ತಿಳಿದುಕೊಂಡರು. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.