ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮಹಾರಾಷ್ಟ್ರ ಗಡಿ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದಿದೆ. ನವೆಂರ್ 1ರಂದು ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆಗೆ ಮುಂದಾಗಿದ್ದು, ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೆಂಬಲ ಸೂಚಿಸಿದ್ದಾರೆ.
ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ-ಎಂಇಎಸ್ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸುತ್ತದೆ. ಅದೇ ರೀತಿ ಈ ವರ್ಷವೂ ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದು, ಈ ಬಾರಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬೆಂಬಲ ಸೂಚಿಸುವ ಮೂಲಕ ಗಡಿ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ನವೆಂಬರ್ 1ರಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರದಿಂದ ಪ್ರತಿನಿಧಿಯನ್ನು ಕಳುಹಿಸುತ್ತೇವೆ. ಮಹಾರಾಷ್ಟ್ರದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎಂ ಶಿಂಧೆ ಹೇಳಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅವಕಾಶವಿಲ್ಲ ಎಂದು ಎಂಇಎಸ್ ಗೆ ಸ್ಪಷ್ಟಪಡಿಸಿದ್ದರು. ಅಲ್ಲದೇ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ, ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಆದರೆ ಇದೀಗ ಮಹಾರಾಷ್ಟ್ರ ನಾಯಕರನ್ನು ಕರಾಳ ದಿನಾಚರಣೆಗೆ ಕಳುಹಿಸುವುದಾಗಿ ಸಿಎಂ ಶಿಂಧೆ ಹೇಳಿದ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡರು ಸಭೆ ಕರೆದು ಕರಾಳ ದಿನಾಚರಣೆ ನಡೆಸುವ ಕುರಿತು ಚರ್ಚೆ ನಡೆಸಿದ್ದಾರೆ.