ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯದಲ್ಲಿ ಮುಡಾ ಹಗರಣದ ಚರ್ಚೆಯನ್ನು ಹತ್ತಿಕ್ಕಲೆಂದೇ ಸ್ವತಃ ಕಾಂಗ್ರೆಸ್ ಸರ್ಕಾರದಿಂದ ನಟ ದರ್ಶನ್ ಮಾಡಿದ್ದಾರೆನ್ನಲಾದ ರೇಣುಕಾಸ್ವಾಮಿ ಕೊಲೆ ಕೇಸಿನ ಸಂಬಂಧಿತ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಫೋಟೋ ಉದ್ದೇಶಪೂರ್ವಕವಾಗಿಯೇ ರಿಲೀಸ್ ಮಾಡುತ್ತಿದೆ. ಖುದ್ದು ರಾಜ್ಯ ಸರ್ಕಾರದಿಂದಲೇ ಈ ಕೆಲಸ ಮಾಡಲಾಗುತ್ತಿದೆ. ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿಯದ್ದು ರಾಜ್ಯ ಕಂಡಂತಹ ಅತ್ಯಂತ ಕ್ರೂರ ಹತ್ಯೆಯಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆನ್ನಲಾದ ಮುಡಾ ಹಗರಣ ಮತ್ತು ಕಾಂಗ್ರೆಸ್ ಸರ್ಕಾರದ ಮಂತ್ರಿ ನಾಗೇಂದ್ರ ಅವರು ಭಾಗಿಯಾಗಿರುವ ವಾಲ್ಮೀಕಿ ಹಗರಣಗಳು ಹೊರಗೆ ಬಂದ ನಂತರ ಅವುಗಳ ಬಗ್ಗೆ ಚರ್ಚೆ ಜೋರಾಯಿತು.ಹೀಗಾಗಿ ಈ ಚರ್ಚೆಯನ್ನು ಡೈವರ್ಟ್ ಮಾಡುವ ಉದ್ದೇಶದಿಂದಲೇ ಸ್ವತಃ ರಾಜ್ಯ ಸರ್ಕಾರದಿಂದಲೇ ಪುನಃ ನಟ ದರ್ಶನ್ ಪ್ರಕರಣವನ್ನು ಮುನ್ನೆಲೆಗೆ ಎಳೆದು ತರಲಾಗಿದೆ. ಸಂಕುಚಿತ ಷಡ್ಯಂತ್ರ ಮನೋಭಾವದಿಂದ ಹೀಗೆ ಮಾಡಲಾಗಿದೆ. ಇಲ್ಲಿ ಕೊಲೆ ಮಾಡಿದವರಿಗೆ ನ್ಯಾಯಾಲಯದಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕು. ಆದರೆ, ಆರೋಪಿಗಳ ಮೊಬೈಲ್ ಫೋನ್‌ಗಳಿಂದ ರಿಟ್ರೀವ್ (ಮರು ಸಂಗ್ರಹಿಸಲಾದ) ಮಾಡಿದ ಫೋಟೋಗಳನ್ನು ಬಿಡುಗಡೆ ಮಾಡಿರೋದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಒಂದು ಗಂಭೀರ ಕೊಲೆ ಕೇಸಿಗೆ ಸಂಬಂಧಿಸಿದ ಫೋಟೋಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತಿರುವ ವಿಚಾರವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಕಾರಣಿಕರ್ತರಾದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ಇಲ್ಲಿ ವಿಷಯಾಂತರ ಮಾಡಲೆಂದೇ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದರು.