ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರೋ ಅಂಜನಾದ್ರಿ ಬೆಟ್ಟಕ್ಕೆ, ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಆಂಜನೇಯನ ದರ್ಶನ ಪಡೆಯಬೇಕಾದರೆ, ಬೆಟ್ಟದಲ್ಲಿರುವ 575 ಮೆಟ್ಟಿಲುಗಳನ್ನು ಹತ್ತಲೇಬೇಕು. ವೃದ್ದರು, ಮಕ್ಕಳು, ಆರೋಗ್ಯ ಸಮಸ್ಯೆ ಇರುವರು, ಬೆಟ್ಟ ಹತ್ತಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೇ ಕಾರಣಕ್ಕೆ ಬೆಟ್ಟ ಹತ್ತಲು ರೋಪ್ ವೇ ನಿರ್ಮಾಣ ಮಾಡಬೇಕು ಅನ್ನೋ ಆಗ್ರಹ ಜೋರಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಬೇಕು ಎನ್ನುವ ಬಹುವರ್ಷಗಳ ಬೇಡಿಕೆ ಇದೀಗ ಇಡೇರುತ್ತಿದ್ದು, ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಕೇಂದ್ರದ ರೈಟ್ ಸಂಸ್ಥೆಯ ಅಧಿಕಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಜನಾಂದ್ರಿ ಬೆಟ್ಟದ ಎಡಭಾಗದಲ್ಲಿ ಬೇಸ್ ಸ್ಟೇಷನ್ ಸಿದ್ದ ಮಾಡಿಕೊಂಡು, ಬೆಟ್ಟದ ಮೇಲಿರುವ ಚಿಕ್ಕ ಕೆರೆ ಬಳಿ ಲ್ಯಾಂಡಿಂಗ್ ಸ್ಟೇಷನ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಒಟ್ಟು 450 ಮೀಟರ್ ಉದ್ದದ ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ.
ಅಂದುಕೊಂಡಂತೆ ಎಲ್ಲವೂ ನಡೆದರೇ ಅಂಜನಾದ್ರಿ ಬೆಟ್ಟಕ್ಕೆ ಒಂದಲ್ಲ, ಎರಡಲ್ಲ, ಮೂರು ರೋಪ್ ವೇ ನಿರ್ಮಾಣದ ಪ್ಲ್ಯಾನ್ ನಡೆದಿದ್ದು, ಮೊದಲ ಹಂತದಲ್ಲಿ ಒಂದು ರೋಪ್ ವೇ ನಿರ್ಮಾಣಕ್ಕೆ ಈಗಾಗಲೇ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.