ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಪುನರಾಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಪುನರಾಯ್ಕೆ ಆಗಿದ್ದಾರೆ.
ನಾಗಪುರದ ರೇಶಿಂಬಾಗ್ ನ ಸ್ಮೃತಿ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಬೈಠಕ್ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಈ ಪುನರಾಯ್ಕೆ ನಡೆದಿದೆ.

‘ದತ್ತಾಜೀ’ ಎಂದೇ ಸಂಘ ಪರಿವಾರ ವಲಯದಲ್ಲಿ ಚಿರಪರಿಚಿತರಾಗಿರುವ ದತ್ತಾತ್ರೇಯ ಹೊಸಬಾಳೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆಯವರು. 1968ರ ವೇಳೆ ವಿದ್ಯಾರ್ಥಿ ದೆಸೆಯಿಂದಲೇ ಆರೆಸ್ಸೆಸ್ ಮತ್ತು ಎಬಿವಿಪಿ ಜೊತೆ ನಿಕಟ ಬಾಂಧವ್ಯ ಹೊಂದಿದ ಇವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿದ್ದಾರೆ.
1975ರ ತುರ್ತುಪರಿಸ್ಥಿತಿ ವಿರೋಧಿಸಿ ಹೋರಾಡಿ ಮೀಸಾ ಕಾನೂನಿನ ಅನ್ವಯ ಎರಡು ವರ್ಷ ಸೆರೆಮನೆ ವಾಸ ಅನುಭವಿಸಿದ್ದರು. ಬಿಡುಗಡೆಯಾದ ಬಳಿಕ, ಆರೆಸ್ಸೆಸ್‌ನ ಪ್ರಮುಖರಾದ ಹೊ.ವೆ. ಶೇಷಾದ್ರಿ ಅವರೊಂದಿಗೆ ತುರ್ತುಪರಿಸ್ಥಿತಿ ಹೋರಾಟದ ಕುರಿತ ಉದ್ಗ್ರಂಥ ‘ಭುಗಿಲು’ ರಚನೆಯಲ್ಲಿ ಸಹಭಾಗಿತ್ವ ವಹಿಸಿದ್ದರು. 1978ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿಗಳ ನಿರ್ವಹಣೆ. ವಿದ್ಯಾರ್ಥಿ ಆಂದೋಲನಕ್ಕೆ ಹೆಜ್ಜೆ ಗುರುತುಗಳಾಗಬಹುದಾದ ಹಲವು ಕೊಡುಗೆಗಳನ್ನು ಇವರು ನೀಡಿದ್ದಾರೆ.
2002ರಲ್ಲಿ ಹೊಸಬಾಳೆ ಅವರಿಗೆ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಹೊಣೆಗಾರಿಕೆ. 2009ರಲ್ಲಿ ಸಂಘದ ಸಹಸರಕಾರ್ಯವಾಹರಾಗಿ ಜವಾಬ್ದಾರಿ ವಹಿಸಲಾಗಿತ್ತು. 2021ರಲ್ಲಿ ಸಂಘದ ಸರಕಾರ್ಯವಾಹರಾಗಿ ಆಯ್ಕೆಯಾಗಿದ್ದರು. ಈಗ ಮತ್ತೊಮ್ಮೆ ಚುನಾವಣೆ ಪ್ರಕ್ರಿಯೆಯಲ್ಲಿ ಸರಕಾರ್ಯವಾಹರಾಗಿ ಆಯ್ಕೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!