ಜಾಗತಿಕ ಹಿಂದು ಪುನರುತ್ಥಾನದ ಕುರಿತು ದತ್ತಾತ್ರೇಯ ಹೊಸಬಾಳೆ ಮಾತುಕತೆ

  • ಸಾರಸಂಗ್ರಹ ಕನ್ನಡಾನುವಾದ- ಚೈತನ್ಯ ಹೆಗಡೆ

ನವೆಂಬರ್ 24ರಿಂದ 26ರವರೆಗೆ ತೈಲ್ಯಾಂಡಿನ ಬ್ಯಾಂಕಾಕ್ ನಗರದಲ್ಲಿ ವರ್ಲ್ಡ್ ಹಿಂದು ಕಾಂಗ್ರೆಸ್ ಸಮಾವೇಶ ನಡೆಯಿತಷ್ಟೆ. ಆ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಮಾವೇಶವನ್ನು ಉದ್ದೇಶಿಸಿ ಆಡಿದ್ದ ಮಾತುಗಳು ಅದಾಗಲೇ ಹೊಸ ದಿಗಂತ ಡಿಜಿಟಲ್ ನಲ್ಲಿ ವರದಿಯಾಗಿವೆ.

ಅದೇ ಸಂದರ್ಭದಲ್ಲಿ ದತ್ತಾತ್ರೇಯ ಹೊಸಬಾಳೆಯವರು ಭಾರತದ ಜನಪ್ರಿಯ ಯೂಟ್ಯೂಬ್ ಸಂವಾದಕಾರರ (ಪಾಡ್ ಕಾಸ್ಟರ್) ಪೈಕಿ ಒಬ್ಬರಾಗಿರುವ ಅಭಿಜಿತ್ ಚಾವ್ಡಾ ಅವರ ಜತೆ ಮಾತುಕತೆಗೆ ತೆರೆದುಕೊಂಡಿದ್ದರು. ಇದೀಗ ಅಭಿಜಿತ್ ಚಾವ್ಡಾ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಆ ಮಾತುಕತೆಯನ್ನು ಪ್ರಕಟಿಸಿದ್ದಾರೆ. ಅದರ ಸಾರ ಸಂಗ್ರಹರೂಪ ಇಲ್ಲಿದೆ.

  • 2014ರಲ್ಲಿ ಪ್ರಾರಂಭವಾದ ವರ್ಲ್ಡ್ ಹಿಂದು ಕಾಂಗ್ರೆಸ್ ಮೊದಲ ಬಾರಿಗೆ ಸೇರಿತ್ತು. ಈಗ ಮತ್ತೆ ಸಮಾವೇಶವಾಗಿದೆ. ಏನಿದರ ಫಲಶ್ರುತಿ?

ದತ್ತಾತ್ರೇಯ ಹೊಸಬಾಳೆ- ನೂರಕ್ಕೂ ಹೆಚ್ಚು ದೇಶಗಳಲ್ಲಿ ಇವತ್ತು ಹಿಂದುಗಳು ಹರಡಿದ್ದಾರೆ. ಮಾನವ ಸಮೂಹದ ಆರನೆಯ ಒಂದಂಶ ಹಿಂದುಗಳಿದ್ದಾರೆ. ಅನಿವಾಸಿ ಹಿಂದುಗಳದ್ದು ದೊಡ್ಡ ಪ್ರಭಾವಲಯವಿದೆ. ಹಿಂದುಗಳು ಯಾವುದೇ ದೇಶದಲ್ಲಿದ್ದರೂ ಅವರು ಅಲ್ಲಿನ ವ್ಯವಸ್ಥೆಗೆ ದುಡಿಯುವ, ಕಾನೂನು ಪಾಲಿಸುವ ಹಾಗೂ ಶಾಂತಿಯುತ ಸಹಬಾಳ್ವೆಯ ಸಮೂಹವಾಗಿದ್ದಾರೆ.

ಕಳೆದ 2-3 ದಶಕಗಳಲ್ಲಿ ಹಿಂದು ಜಾಗೃತಿಯಾಗುತ್ತಿದೆ. ವಿದೇಶಗಳಲ್ಲಿರುವವರು ತಮ್ಮ ಮಾತೃಭೂಮಿ ಭಾರತದ ಜತೆ ಬೆಸೆದುಕೊಳ್ಳುವುದಲ್ಲದೇ ತಮ್ಮ ಹಿಂದು ಪರಂಪರೆ ಬಗ್ಗೆ ಜಾಗೃತಿ ಬೆಳೆಸಿಕೊಂಡು ಆಯಾ ದೇಶಗಳಲ್ಲಿ ವ್ಯವಸ್ಥೆಗಳನ್ನು ಕಟ್ಟುತ್ತಿದ್ದಾರೆ, ಕೊಡುಗೆ ನೀಡುತ್ತಿದ್ದಾರೆ. ಐತಿಹಾಸಿಕವಾಗಿ ದಮನಕ್ಕೆ ಒಳಗಾದವರು ಹಿಂದುಗಳು. ರಾಜಕೀಯ ಸಿದ್ಧಾಂತವೊಂದರ ಕಾರಣದಿಂದ ನಾವು ಆ ಸ್ಥಿತಿ ಎದುರಿಸಬೇಕಾಯಿತು. ಆದರೀಗ ವಿದೇಶಗಳಲ್ಲಿರುವ ಯುವ ಹಿಂದುಗಳಲ್ಲೂ ಈ ಬಗ್ಗೆ ಜಾಗೃತಿ ಬರುತ್ತಿದೆ. ಈ ಎಲ್ಲ ಹಿಂದುಗಳು ನಾಲ್ಕು ವರ್ಷಕ್ಕೊಮ್ಮೆ ಒಂದು ವೇದಿಕೆಯಲ್ಲಿ ಬಂದು ತಮ್ಮ ಐಡೆಂಟಿಟಿ ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ, ನಾನಾ ಆಯಾಮಗಳಲ್ಲಿ ನಾಯಕತ್ವವನ್ನು ಕಂಡುಕೊಳ್ಳುವುದಕ್ಕಾಗಿ ಸಮಾವೇಶವಾಗುತ್ತಿದೆ.

ಅಂತೆಯೇ, ಹಿಂದುಗಳು ಕೆಲವು ವ್ಯೂಹಾತ್ಮಕ ಆಯಾಮಗಳಾದ ಉದ್ಯಮ ಕಟ್ಟುವಿಕೆ ಹಾಗೂ ವ್ಯಾಖ್ಯಾನಗಳನ್ನು ನಿರೂಪಿಸುವ ಕಡೆಗಳಲ್ಲಿ ಬಲವಾಗಬೇಕಾದ, ಹಿಂದು ಐಡೆಂಟಿಟಿ ಗಟ್ಟಿಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ಅದು ಭವಿಷ್ಯದಲ್ಲಿ ಹಿಂದು ಮೌಲ್ಯಗಳನ್ನು ತಮ್ಮ ಜೀವನ ಮತ್ತು ವೃತ್ತಿಗಳಲ್ಲಿ ರೂಢಿಸಿಕೊಂಡು ತಾವಿರುವ ದೇಶಗಳಲ್ಲಿ ಕೊಡುಗೆ ನೀಡುವುದಕ್ಕೆ ಇದು ಸಹಕಾರಿ.

2014ರಲ್ಲಿ ವರ್ಲ್ಡ್ ಕಾಂಗ್ರೆಸ್ ಸೇರಿದಾಗ ಪರಸ್ಪರರು ಬೆಸೆದುಕೊಳ್ಳುವಂಥ ಜಾಲ ನಿರ್ಮಾಣವಾಯಿತು. ಭಾರತ ಮತ್ತು ಜಗತ್ತಿನಾದ್ಯಂತ ಇರುವ ವೃತ್ತಿಪರರು, ಉದ್ಯಮಿಗಳು, ಅಕಾಡೆಮಿಕ್ ವ್ಯಕ್ತಿಗಳು, ಬರಹಗಾರರು, ಚಿಂತಕರು, ಸಂಘಟಕರು ಇವೆರೆಲ್ಲರು ಒಂದೆಡೆ ಕಲೆಯುವ ಪ್ರಕ್ರಿಯೆಯಿಂದ ನೆಟ್ವರ್ಕಿಂಗ್ ಸಾಧ್ಯವಾಗಿದೆ. ಇದರಿಂದಾಗಿ ವಿಶ್ವಾಸ ಹೆಚ್ಚಿಸಿಕೊಂಡು ಎಂಥದೇ ಪರಿಸ್ಥಿತಿಯನ್ನು ಎದುರಿಸುವ ಮನಸ್ಥಿತಿ ಸಾಧ್ಯವಾಗುತ್ತದೆ.

  • ಅದೇಕೆ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ಸಮಾವೇಶ?

ದತ್ತಾತ್ರೇಯ ಹೊಸಬಾಳೆ- ಅಂತಾರಾಷ್ಟ್ರೀಯಮಟ್ಟದ ಸಮಾವೇಶ ಪ್ರತಿವರ್ಷ ನಡೆಸುವುದು ಕಷ್ಟ. ಇದಕ್ಕೆ ವ್ಯಾಪಕ ತಯಾರಿಗಳು ಬೇಕಾಗುತ್ತವೆ. ಕೋವಿಡ್ ಕಾರಣದಿಂದ 2022ರಲ್ಲಿ ನಡೆಸಬೇಕಿದ್ದ ಸಮಾವೇಶ ಸಾಧ್ಯವಾಗಲಿಲ್ಲ. ಜಗತ್ತಿನ ನಾನಾ ಭಾಗದ ಹಿಂದು ಪ್ರಮುಖರು ಬರಬೇಕಿದ್ದಾಗ ಅವರ ಸಮಯ ಹೊಂದಾಣಿಕೆಗಳು ಮುಖ್ಯವಾಗುತ್ತವೆ. ಅಲ್ಲದೇ, ಸಮಾವೇಶದ ಅಂತ್ಯದಲ್ಲಿ ಕಂಡುಕೊಂಡ ಮಾರ್ಗದರ್ಶಿ ಸೂತ್ರಗಳನ್ನು ಸ್ವಲ್ಪಮಟ್ಟಿಗಾದರೂ ಅನುಷ್ಠಾನಕ್ಕೆ ತರುವುದಕ್ಕೆ ವರ್ಷದ ಸಮಯ ಸಾಕಾಗುವುದಿಲ್ಲ. ಹಾಗೆ ಕಾರ್ಯಸಾಧನೆಯೇ ಇಲ್ಲದೇ ವಾರ್ಷಿಕವಾಗಿ ಸಮಾವೇಶವನ್ನು ಮಾತ್ರ ನಡೆಸಿದರೆ ಅದಕ್ಕೆ ಮಹತ್ವ ಬರುವುದಿಲ್ಲ.

  • 2022-23ರ ಈ ಸಮಯದಲ್ಲಿ ಭಾರತ ಮತ್ತು ಇತರೆಡೆಗಳಲ್ಲಿ ಹಿಂದುಗಳು ಎದುರಿಸುತ್ತಿರುವ ಪ್ರಮುಖ ಸವಾಲೇನು?

ದತ್ತಾತ್ರೇಯ ಹೊಸಬಾಳೆ: ಭಾರತದಮಟ್ಟಿಗೆ ಹೇಳುವುದಾದರೆ, ಕೇಂದ್ರದಲ್ಲಾದ ರಾಜಕೀಯ ಬದಲಾವಣೆಯಿಂದಾಗಿ ಹಲವು ಒಳ್ಳೆಯ ಸಂಗತಿಗಳಾಗಿವೆ. ಅವೆಲ್ಲದರ ಪರಿಣಾಮ ಈಗಷ್ಟೇ ತೆರೆದುಕೊಳ್ಳುತ್ತಿದೆ. ಆದಾಗ್ಯೂ, ರಾಜಕೀಯ ಸೂತ್ರ ನಮ್ಮ ವಿಚಾರಕ್ಕೇ ಸಿಕ್ಕಿದ್ದರೂ ಬೇರೆ ಬೇರೆ ವಲಯಗಳಲ್ಲಿ ಸೆಕ್ಯುಲರಿಸ್ಟಿಕ್ ಅಂತ ಕರೆಸಿಕೊಳ್ಳುವ ಧೋರಣೆ ಹಾಗೆಯೇ ಉಳಿದುಕೊಂಡಿದೆ. ದೇವಾಲಯಗಳಿನ್ನೂ ಸರ್ಕಾರಗಳ ನಿಯಂತ್ರಣಗಳಿಂದ ಮುಕ್ತವಾಗಿಲ್ಲ. ಹಿಂದುಗಳನ್ನು ದೂಷಿಸುವ ಕೆಲಸ ಮುಂದುವರಿದಿದೆ. ಸರ್ಕಾರವೇನೋ ಹಿಂದುಪವಾದದ್ದೇ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ ಅಕಾಡೆಮಿಕ್ ಮತ್ತು ಮಾಧ್ಯಮ ವಲಯಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಹಿಂದು ಬೌದ್ಧಿಕ ವಲಯವನ್ನು ಬಲಪಡಿಸುವ ಕೆಲಸ ಬಾಕಿ ಇದೆ. ಅದನ್ನು ಭಾವನಾತ್ಮಕವಾಗಿಯಲ್ಲದೇ ತಾರ್ಕಿಕವಾದ ಅಕಾಡೆಮಿಕ್ ಶಿಸ್ತಿನಿಂದ ಮಾಡಬೇಕು.

ಎರಡನೆಯದಾಗಿ, ಮತಾಂತರ ಅನ್ನುವುದು ಭಾರತ ಮತ್ತು ಹೊರಗಿನ ಅನೇಕ ದೇಶಗಳಲ್ಲಿ ಹಿಂದುಗಳಿಗೆ ಪ್ರಮುಖ ಸವಾಲಾಗಿದೆ.

ಮೂರನೆಯದಾಗಿ, ಅನೇಕ ದೇಶಗಳಲ್ಲಿ ಹಿಂದುಗಳ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿದೆ. ಹಿಂದುಗಳಿಗೆ ತಮ್ಮ ಮತಾಚರಣೆಯನ್ನು, ಪೂಜಾಪದ್ಧತಿಗಳನ್ನು ಆಚರಿಸುವುದಕ್ಕೆ ಅನೇಕ ದೇಶಗಳಲ್ಲಿ ಅಡ್ಡಿ ಇದೆ. ಇದು ಮಾನವ ಹಕ್ಕಿನ ವಿಷಯ.

ವಿಶೇಷವಾಗಿ ಭಾರತಕ್ಕೆ ಅನ್ವಯಿಸುವ ನಾಲ್ಕನೇ ಅಂಶವೆಂದರೆ ಹಿಂದುಗಳಲ್ಲಿರುವ ಜಾತಿ ತಾರತಮ್ಯ. ಅಸ್ಪೃಶ್ಯತೆ ಎಂಬುದು ಈಗ ವ್ಯಾಪಕವಾಗಿ ಕಾಣದಿದ್ದರೂ ಬೇರೆ ಬೇರೆ ಜಾತಿಗಳ ನಡುವೆ ವೈಷಮ್ಯದ ಸಂಗತಿಗಳು ಆಗುತ್ತಿರುತ್ತವೆ.

ಇನ್ನೊಂದಂಶ, ಕುಟುಂಬ ವ್ಯವಸ್ಥೆಯಲ್ಲಿ ಹಿಂದು ಧಾರ್ಮಿಕ ಮೌಲ್ಯಗಳ ಕಲಿಸುವಿಕೆ. ತಥಾಕಥಿತ ಸೆಕ್ಯುಲರ್ ವ್ಯವಸ್ಥೆಯಲ್ಲಿ ಬೆಳೆದ ಪಾಲಕರು ಖಾಸಗಿಯಾಗಿ ಏನೇ ಆಚರಣೆಗಳನ್ನು ಮಾಡುತ್ತಿದ್ದರೂ ಅವನ್ನು ಸಾರ್ವಜನಿಕಗೊಳಿಸುವುದಕ್ಕೆ ಹಿಂದೇಟು ಹಾಕಿಕೊಂಡಿದ್ದಾರೆ. ಇವರು ತಮ್ಮ ಮಕ್ಕಳಲ್ಲಿ ಮೌಲ್ಯ ಹೇಗೆ ಬಿತ್ತಿಯಾರು?

ಹೀಗೆ, ಹಿಂದು ಸಮಾಜವು ಭಾರತದಲ್ಲಿ ಮತ್ತು ಹೊರಗಡೆ ಹಲವು ಸವಾಲುಗಳನ್ನು ಎದುರಿಸುತ್ತಿದೆ.

  • ವರ್ಲ್ಡ್ ಹಿಂದು ಕಾಂಗ್ರೆಸ್ ಸಮಾವೇಶದಲ್ಲಿ ಬಹಳ ಭಿನ್ನ ಹಿನ್ನೆಲೆಗಳಿಂದ ಬಂದ ನಾಯಕರೆಲ್ಲ ಇದ್ದರು. ಇಲ್ಲಿನ ಮಂಥನವನ್ನು ವೈಯಕ್ತಿಕ ನೆಲೆಯಲ್ಲಿ ಅವರೆಲ್ಲ ಹೇಗೆ ಮುಂದೆ ತೆಗೆದುಕೊಂಡು ಹೋಗಲಿದ್ದಾರೆ?

ದತ್ತಾತ್ರೇಯ ಹೊಸಬಾಳೆ: ಅವರೆಲ್ಲ ತಮ್ಮ ತಮ್ಮ ವಲಯಗಳನ್ನು ಗುರುತಿಸಿಕೊಂಡಿದ್ದಾರೆ. ಕೆಲವರು ಶಿಕ್ಷಣ ವಿಷಯದಲ್ಲಿ, ಇನ್ನು ಕೆಲವರು ಸಂಘಟನೆ ವಿಚಾರದಲ್ಲಿ, ಮತ್ತೆ ಕೆಲವರು ದೇವಾಲಯಗಳ ವಿಚಾರದಲ್ಲಿ, ಉದ್ದಿಮೆ, ಅಕಾಡೆಮಿಕ್, ಮಾಧ್ಯಮ ಹೀಗೆಲ್ಲ. ಸಮಾವೇಶದಲ್ಲಿ ಒಟ್ಟೂ 7 ಥೀಮ್ ಗಳಿದ್ದವು. ವಿಷಯ ಮಂಥನಕ್ಕೆ ಬಂದ ಆಹ್ವಾನಿತರು ತಮ್ಮ ತಮ್ಮ ಸಾಮರ್ಥ್ಯದ ಪ್ರದೇಶಗಳನ್ನು ಗುರುತಿಸಿಕೊಂಡು ಹಿಂದು ಮೌಲ್ಯಗಳ ಬಲವರ್ಧನೆಗೆ ಕೆಲಸ ಮಾಡುತ್ತಾರೆಂಬ ಅಪೇಕ್ಷೆ ಇದೆ.

ಈ ಸಮಾವೇಶಗಳಲ್ಲಿ ಆಹ್ವಾನಿತರಲ್ಲದವರೂ ಸ್ಫೂರ್ತಿ ಪಡೆದು ತಮ್ಮ ಕ್ಷೇತ್ರಗಳನ್ನು ಗುರುತಿಸಿಕೊಂಡು ಯೋಗದಾನ ನೀಡುವುದಕ್ಕೆ ಪ್ರಾರಂಭಿಸಬೇಕು.

ಮುಖ್ಯವಾಗಿ, ಇಂಥ ಸಮಾವೇಶಗಳಲ್ಲಿ ಒಂದು ವಲಯದಲ್ಲಿ ಕೆಲಸ ಮಾಡುವ ಹಲವು ಗುಂಪುಗಳ ಪರಸ್ಪರ ಬಂಧ ಏರ್ಪಡುತ್ತದೆ. ಈ ನೆಟ್ವರ್ಕಿಂಗ್ ತುಂಬ ಮುಖ್ಯ. ಮುಂದಿನ ಹಂತದಲ್ಲಿ, ಆ ನಿರ್ದಿಷ್ಟ ವಿಚಾರದಲ್ಲಿ ತಾನೇ ಒಂದು ದ್ವೀಪವಾಗಿ ಕೆಲಸ ಮಾಡುತ್ತೇನೆಂಬ ಧೋರಣೆ ತಾಳದೆಯೇ, ತನ್ನ ಸಂಘಟನೆಯ ಅಹಮಿಕೆ ಬಿಟ್ಟು ಸಮನ್ವಯಕಾರಿ ಕೆಲಸದಲ್ಲಿ ತೊಡಗಿಕೊಳ್ಳುವ ಮನೋಭಾವ ಆಯಾ ವ್ಯಕ್ತಿಗಳಿಗಿರಬೇಕಾಗುತ್ತದೆ. ಈ ಮನೋಭಾವವನ್ನು ಉದ್ದೀಪಿಸುವ ಕಾರ್ಯವನ್ನು ಸಮಾವೇಶದಲ್ಲಿ ಮಾಡಲಾಗಿದೆ.

  • ನಾವೀಗ ಸುವರ್ಣಭೂಮಿ ತೈಲ್ಯಾಂಡಿನಲ್ಲಿದ್ದೇವೆ. ನಾವಿರುವ ನಗರ ಬ್ಯಾಂಕಾಕ್ ಹಿಂದೆ ಇಂದ್ರಪುರಿ ಅಂತಲೂ ಕರೆಸಿಕೊಂಡಿತ್ತು. ಹೀಗೆ ಆಗ್ನೇಯ ಏಷ್ಯದ ದೇಶಗಳ ಹಿಂದು ಐಡೆಂಟಿಟಿಯೊಂದಿಗೆ ನಮ್ಮನ್ನು ಸಂಪರ್ಕಿಸಿಕೊಳ್ಳುವುದಕ್ಕೆ ಭಾರತೀಯರೇನು ಮಾಡಬೇಕು?

ದತ್ತಾತ್ರೇಯ ಹೊಸಬಾಳೆ: ಇಲ್ಲಿರುವ ಸಕಾರಾತ್ಮಕ ಸಂಗತಿ ಎಂದರೆ, ತೈಲ್ಯಾಂಡ್ ಸೇರಿದಂತೆ ಆಗ್ನೇಯ ಏಷ್ಯದ ರಾಷ್ಟ್ರಗಳು ತಮ್ಮ ಭಾರತ ಮೂಲದ ಸಂಸ್ಕೃತಿ ಜತೆ ಅಭಿಮಾನದಿಂದಲೇ ಗುರುತಿಸಿಕೊಳ್ಳುತ್ತವೆ. ಇಲ್ಲಿನ ಗೈಡ್ ನಮಗೆ ಬಹಳಷ್ಟು ಸಂಗತಿಗಳನ್ನು ಇದು ರಾಮಾಯಣಕ್ಕೆ ಸಂಬಂಧಿಸಿದ್ದು ಅಂತಲೇ, ಸಂಸ್ಕೃತಕ್ಕೆ ಸಂಬಂಧಿಸಿದ್ದೆಂದೋ ಪರಿಚಯಿಸುತ್ತ ಭಾರತಮೂಲವನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲಿನ ಬೌದ್ಧ ಮತಾನುಯಾಯಿಗಳಿಗೆ ಅದು ಭಾರತದಿಂದಲೇ ಬಂದಿದ್ದೆಂಬ ಅರಿವಿದೆ.

ಭಾರತದ ಜನ ಮತ್ತು ಸರ್ಕಾರದ ಮಟ್ಟದಲ್ಲಿ ಸಹ, ಲುಕ್ ಈಸ್ಟ್ ಮತ್ತು ಈಗಿನ ಆ್ಯಕ್ಟ್ ಈಸ್ಟ್ ನೀತಿಗಳ ಮೂಲಕ ಅನೇಕ ಜಂಟಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತೈಲ್ಯಾಂಡಿನ ಬೌದ್ಧ ಸನ್ಯಾಸಿಗಳು ಮತ್ತು ರಾಜ ಪರಿವಾರ ಭಾರತದ ವಿಶ್ವವಿದ್ಯಾಲಯಗಳಲ್ಲಿ ಓದಿದ್ದಾರೆಂಬುದು ಭಾರತ ಮಾಡಿರುವ ಉತ್ತಮ ಹೂಡಿಕೆ. ಇಲ್ಲಿನ ಬೌದ್ಧ ಸನ್ಯಾಸಿ ಶ್ರೇಣಿಯಲ್ಲಿ ಎರಡನೆಯ ಪ್ರಮುಖ ಹುದ್ದೆಯಲ್ಲಿರುವವರನ್ನು ನಾನು ಭೇಟಿಯಾದ ಸಂದರ್ಭದಲ್ಲಿ ಅವರು ಪುಣೆಯಲ್ಲಿ ಕಲಿತವರೆಂದೂ, ಚಾಣಕ್ಯ ನೀತಿಯನ್ನು ತಾಯ್ ಭಾಷೆಗೆ ಅನುವಾದಿಸಿದ್ದಾರೆಂಬುದೂ ತಿಳಿಯಿತು.

ಇಲ್ಲಿನ ಹಿಂದು ಧರ್ಮಗುರುಗಳು ತಮ್ಮ ಆಚರಣೆಗಳನ್ನು ಮುಕ್ತತೆಯಿಂದ ಮಾಡುತ್ತಾರೆ ಮತ್ತು ಇಲ್ಲಿನ ಸಮಾಜ ಅದಕ್ಕೆ ಆಕ್ಷೇಪಿಸದೇ ಗೌರವವನ್ನೇ ಕೊಟ್ಟಿದೆ. ಇಲ್ಲಿನ ರಾಜನನ್ನು ರಾಮನೆನ್ನುತ್ತಾರೆ, ಅಯೋಧ್ಯೆ ಎಂಬ ಪ್ರದೇಶವೂ ಇಲ್ಲಿದೆ. ಹೀಗಾಗಿ ಇಲ್ಲಿನ ಹಿಂದುಗಳ ಬಗ್ಗೆ ಅಸೂಯೆಯೇ ಆಗುವಂತಿದೆ!

ಸರ್ಕಾರದ ಹೊರತಾಗಿ, ಇಂಡಿಯನ್ ಕಲ್ಚರ್ ಸ್ಟಡಿ ಹಾಗೂ ವರ್ಲ್ಡ್ ಕಾಂಗ್ರೆಸ್ ಥರದ ಸಂಸ್ಥೆಗಳೇ ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಜಂಟಿ ಅಧ್ಯಯನ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಆಯುರ್ವೇದ, ಸಂಸ್ಕೃತ ಕಲಿಕೆಗಳು ಆಗುತ್ತಿವೆ.

  • ಇನ್ನೂ ನೂರು ವರ್ಷಗಳಲ್ಲಿ ನಾವು ಹಿಂದುಗಳು, ಭಾರತೀಯರು ಯಾವ ಸಾಧನೆಯ ದೃಷ್ಟಿಕೋನ ಇರಿಸಿಕೊಳ್ಳಬೇಕು?

ದತ್ತಾತ್ರೇಯ ಹೊಸಬಾಳೆ: ಜಗತ್ತು ಶಾಂತಿ ಮತ್ತು ಧಾರ್ಮಿಕ ಮೌಲ್ಯಗಳ ಜಾಗವಾಗುವಂತೆ ನೋಡಿಕೊಳ್ಳುವುದು ಭಾರತೀಯರ ಗುರಿಯಾಗಿರಬೇಕು. ಭಾರತೀಯ ಜಗತ್ತಲ್ಲಿ ಸೂರ್ಯ ಮುಳುಗಲಾರ, ಏಕೆಂದರೆ ಅಷ್ಟೆಲ್ಲ ದೇಶಗಳಲ್ಲಿ ಹಿಂದುಗಳು ಹರಡಿಕೊಂಡಿದ್ದಾರೆ. ಹಾಗೆಂದು ಅಹಂಕಾರವಿಲ್ಲ. ನಮಗೆ ಬಿಗ್ ಬ್ರದರ್ ಧೋರಣೆ ಇಲ್ಲ. ವೈವಿಧ್ಯವನ್ನು ಹರಡುವುದೇ ಹಿಂದು ಗುಣಲಕ್ಷಣ. ಆ ವೈವಿಧ್ಯದಲ್ಲಿ ಏಕತೆ ಸಾಧಿಸಬೇಕು.

ನಾವೊಂದು ಅಧ್ಯಯನ ಶಿಸ್ತನ್ನು ಹರಡುತ್ತಿದ್ದೇವೆ. ಅದೆಂದರೆ ಜಗತ್ತಿನ ಪ್ರಾಚೀನ ಸಂಸ್ಕೃತಿಗಳ ಅಧ್ಯಯನ. ಕ್ರೈಸ್ತಮತ ಉದಯಕ್ಕಿಂತ ಮೊದಲಿದ್ದ ಅವುಗಳನ್ನು ಪೇಗನ್ ಎಂಬ ನಿಂದನಾತ್ಮಕ ಶಬ್ದದಲ್ಲಿ ಕರೆಯಲಾಗಿದೆ. ಅದು ತಪ್ಪು. ಅವನ್ನು ನಾವು ಪ್ರಾಚೀನ ಸಂಸ್ಕೃತಿಗಳೆಂದು ನೋಡುತ್ತೇವೆ. ಅವೆಲ್ಲ ತಮ್ಮ ಆಚರಣೆಗಳಲ್ಲಿ ಹಿಂದು ಪದ್ಧತಿಗಳನ್ನು ಉಳಿಸಿಕೊಂಡಿವೆ. ಅಂಥವರನ್ನೆಲ್ಲ ಬೆಸೆಯುವ ಕಾರ್ಯ ನಡೆಯುತ್ತಿದೆ.

ಮುಂದಿನ ನೂರು ವರ್ಷದ ಭಾರತೀಯ ದರ್ಶನ ಏನಿರಬೇಕೆಂದರೆ ಯುದ್ಧಗಳ ಅಂತ್ಯ ಮತ್ತು ಸಂಸ್ಕೃತಿಗಳ ಕೊಡು-ಕೊಳ್ಳುವಿಕೆ. ಭಾರತದ 200 ಬೇರೆ ಬೇರೆ ಜಾಗಗಳಲ್ಲಿ ಜಿ20ಕ್ಕೆ ಸಂಬಂಧಿಸಿದಂತೆ ನಡೆದ ಸಭೆಗಳು ಇದು ಸಾಧ್ಯ ಎಂಬುದನ್ನು ತೋರಿಸಿದೆ. ಭಾರತಕ್ಕೆ ಆ ಶಕ್ತಿ ಇದೆ. ಜಿ20ಯಲ್ಲಿ ಹೇಳಲಾಗಿರುವ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬುದೇ ಭಾರತದ ನೂರು ವರ್ಷಗಳ ನೀಲನಕ್ಷೆಯ ದೃಷ್ಟಿಕೋನವಾಗಿರಲು ಸೂಕ್ತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!