ಹೊಸದಿಗಂತ ವರದಿ ದಾವಣಗೆರೆ:
ಶಾಲಾ ಪ್ರಾರ್ಥನೆ ವೇಳೆ ಬೇರೊಬ್ಬ ವಿದ್ಯಾರ್ಥಿಯ ಬಟ್ಟೆ ಧರಿಸಿ ಬಂದಿದ್ದಕ್ಕೆ ವಾರ್ಡನ್ ಬಟ್ಟೆ ತೆಗೆಸಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ರಾತ್ರೋರಾತ್ರಿ ವಸತಿಶಾಲೆಯನ್ನು ತೊರೆದ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಘಟನೆ ನಡೆದ 24 ಗಂಟೆಯಲ್ಲೇ ನಾಪತ್ತೆಯಾಗಿದ್ದ ಬಾಲಕ ಸುರಕ್ಷಿತವಾಗಿ ಸಿಕ್ಕಿದ್ದಾನೆ.
ನಗರದ ಖಾಸಗಿ ವಸತಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಎಸ್.ಜೀವನ್ ಕಳೆದ ರಾತ್ರಿ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ದೇವರ ಹೊಸಹಳ್ಳಿ ಗ್ರಾಮದ ಸತೀಶ್-ಸವಿತಾ ದಂಪತಿ ಮೊದಲನೇ ಮಗನಾದ ಈತ ಕಳೆದ 3 ವರ್ಷಗಳಿಂದ ಇದೇ ವಸತಿ ಶಾಲೆಯಲ್ಲಿ ಓದುತ್ತಿದ್ದ. ಬೇರೆ ವಿದ್ಯಾರ್ಥಿಯ ಬಟ್ಟೆ ಹಾಕಿದ್ದಾನೆಂದು ವಾರ್ಡನ್ ಗ್ರೌಂಡ್ ನಲ್ಲೇ ಜೀವನ್ ಧರಿಸಿದ್ದ ಬಟ್ಟೆ ಬಿಚ್ಚಿಸಿದ್ದರು. ಎಲ್ಲಾ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಬಟ್ಟೆ ಬಿಚ್ಚಿಸಿದ್ದರಿಂದ ಮನನೊಂದ ಜೀವನ್ ರಾತ್ರಿ 8.30ರ ಸುಮಾರಿಗೆ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ. ರಾತ್ರಿ 10 ಗಂಟೆ ವೇಳೆಗೆ ಜೀವನ್ ಹೆತ್ತವರಿಗೆ ವಾರ್ಡನ್ ವಿಷಯ ಮುಟ್ಟಿಸಿದ್ದರು.
ಪೋಷಕರು ಪೊಲೀಸ್ ಸಹಾಯವಾಣಿ 102ಕ್ಕೆ ಕರೆ ಮಾಡಿದ ನಂತರ ಪೊಲೀಸರು ಬಂದು ವಿಚಾರಣೆ ನಡೆಸಿದ್ದಾರೆ. ಮಗನನ್ನು ಹುಡುಕಿ ಕೊಡುವಂತೆ ವಿದ್ಯಾನಗರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಮಗ ನಾಪತ್ತೆಯಾದ ಸುದ್ದಿ ತಿಳಿದ ತಾಯಿ ಸವಿತಾ, ಚಿಕ್ಕಮ್ಮ ಲತಾ, ಚಿಕ್ಕಪ್ಪ ಷಣ್ಮುಖ ದಾವಣಗೆರೆಗೆ ಆಗಮಿಸಿ, ಶಾಲೆಯವರು ಹಾಗೂ ವಾರ್ಡನ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿದ ಬಗ್ಗೆ ಆಂತರಿಕವಾಗಿ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಲೆಯವರು ಪೋಷಕರಿಗೆ ಧೈರ್ಯ ಹೇಳಿದ್ದರು.
ಇದನ್ನೂ ಓದಿ:
ನಾಪತ್ತೆಯಾದ ಜೀವನ್ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಪಂಚೇನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದಾನೆಂಬ ವಿಷಯ ಗೊತ್ತಾಗುತ್ತಿದ್ದಂತೆ ಹೆತ್ತವರು, ಕುಟುಂಬ ವರ್ಗದವರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಪಂಚೇನಹಳ್ಳಿ ಬಸ್ಸು ನಿಲ್ದಾಣದಲ್ಲಿ ಜೀವನ್ ಪತ್ತೆಯಾಗಿದ್ದು, ಆತನನ್ನು ಗುರುತಿಸಿದ ಓರ್ವ ಪ್ರಯಾಣಿಕರು ಬಾಲಕನ ತಂದೆ ಸತೀಶ್‌ಗೆ ಕರೆ ಮಾಡಿದ್ದಾರೆ. ಮಗನ ಜೊತೆ ಮಾತನಾಡಿದ ಸತೀಶ್ ಪಂಚೇನಹಳ್ಳಿಗೆ ತೆರಳಿ, ಮಗನನ್ನು ವಾಪಾಸ್ಸು ತಮ್ಮ ಊರಿಗೆ ಕರೆದೊಯ್ದಿದ್ದಾರೆ. ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಶಾಲೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.



