September 28, 2026
Monday, September 28, 2026
spot_img

WEATHER | ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರ: ಮಲೆನಾಡು, ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಕೆಲವು ದಿನಗಳಿಂದ ಸ್ವಲ್ಪ ವಿರಾಮ ಪಡೆದಿದ್ದ ಮುಂಗಾರು ಇದೀಗ ಮತ್ತೆ ಚುರುಕುಗೊಳ್ಳುವ ಲಕ್ಷಣ ಕಾಣುತ್ತಿದೆ. ಈ ಬಗ್ಗೆ ಹವಾಮಾನ ಇಲಾಖೆ ಬಿಗ್‌ ಅಪ್ಡೇಟ್‌ವೊಂದನ್ನು ನೀಡಿದೆ. ರಾಜ್ಯದಲ್ಲಿ ಸದ್ಯ ಬಿಡುವು ನೀಡಿದ್ದ ವರುಣದೇವ ಸೆ. 8ರಿಂದ ಕರಾವಳಿ, ಮಲೆನಾಡು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮತ್ತೆ ಅಬ್ಬರಿಸು ಮುನ್ಸೂಚನೆ ನೀಡಿದೆ.

ಕರಾವಳಿ – ಮಲೆನಾಡಿನಲ್ಲಿ ಮಳೆ

ಪ್ರಸ್ತುತ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣ ಹವೆ ಇದ್ದರೂ, ಸೆ. 8ರಿಂದ ಮುಂದಿನ ಎರಡು-ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಧ್ಯಾಹ್ನದ ನಂತರ ಹಾಗೂ ಸಂಜೆ ವೇಳೆ ಸಾಧಾರಣ ಮಳೆಯಾಗಲಿದೆ. ವಿಶೇಷವಾಗಿ ಮೂಡಿಗೆರೆ ಸುತ್ತಮುತ್ತ ಭಾರೀ ಮಳೆಯ ನಿರೀಕ್ಷೆಯಿದೆ. ಶಿವಮೊಗ್ಗದಲ್ಲಿ ಸೆ.12ರವರೆಗೆ ಮತ್ತು ಉಳಿದ ಮಲೆನಾಡು ಜಿಲ್ಲೆಗಳಲ್ಲಿ ಸೆ. 14ರ ತನಕ ಮಳೆ ಮುಂದುವರಿಯುವ ಲಕ್ಷಣಗಳಿವೆ ಎಂದು ತಿಳಿಸಿದೆ.

ಒಳನಾಡಿನ ಜಿಲ್ಲೆಗಳ ಕಥೆ ಏನು?

ಉತ್ತರ ಒಳನಾಡಿನ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಮಧ್ಯಾಹ್ನ ಅಥವಾ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಸದ್ಯಕ್ಕೆ ಮುಂದುವರಿಯಲಿದೆ. ಇನ್ನು ದಕ್ಷಿಣ ಒಳನಾಡಿನ ಮೈಸೂರು, ಬೆಂಗಳೂರು ಉತ್ತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಂಜೆ ವೇಳೆ ಸಾಮಾನ್ಯ ಮಳೆಯಾಗಲಿದ್ದು, ಸೆ. 8ರಿಂದ ಗುಡುಗು ಸಹಿತ ಮಳೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಹಿಂಗಾರಿಗೆ ‘ಎಲ್ ನಿನೋ’ ಆತಂಕ?

ಮುಂಗಾರು ದುರ್ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲೇ ಅವಧಿಗೂ ಮುನ್ನವೇ ಗುಡುಗು ಸಹಿತ ಮಳೆ ಆರಂಭವಾಗುತ್ತಿರುವುದು ವಿಶೇಷ. ಇದರ ನಡುವೆ, ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು ಪ್ರಬಲ ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ‘ಎಲ್ ನಿನೋ’ ವಿದ್ಯಮಾನವು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ, ಇದು ರಾಜ್ಯದ ಹಿಂಗಾರು ಮಳೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಆತಂಕವೂ ಎದುರಾಗಿದೆ.

Must Read