September 28, 2026
Monday, September 28, 2026
spot_img

‘ಹನುಮಾನ್ ಅಂಶ್’ ಪವಾಡ: ಭಾರತೀಯ ಚಿತ್ರರಂಗದ ಟಾಪ್ 50 ಸಿನಿಮಾಗಳ ಪಟ್ಟಿಗೆ ಸೇರ್ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ವಾರಗಳ ಹಿಂದೆಯೇ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಹಾಗೂ ಲಾಭದಾಯಕ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಹನುಮಾನ್ ಅಂಶ್’ ಸಿನಿಮಾ, ಈಗಲೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಚಿತ್ರಮಂದಿರಗಳಿಗೆ ಬಂದು ಏಳು ವಾರಗಳು ಕಳೆದಿದ್ದರೂ ಈ ಭಕ್ತಿಪ್ರಧಾನ ಸಿನಿಮಾದ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಇದೀಗ ಎಂಟನೇ ವಾರಾಂತ್ಯದಲ್ಲೂ ಅದ್ಭುತ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಅಷ್ಟೇ ಅಲ್ಲದೆ, ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 50 ಸಿನಿಮಾಗಳ ಪಟ್ಟಿಗೂ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಯಾವುದೇ ದೊಡ್ಡ ತಾರಾಗಣವಿಲ್ಲದೆ, ಅದ್ದೂರಿ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ ಬಂದ ‘ಹನುಮಾನ್ ಅಂಶ್’ ಮೊದಲ ದಿನ ಗಳಿಸಿದ್ದು ಕೇವಲ 10 ಲಕ್ಷ ರೂಪಾಯಿ. ಮೊದಲ ಎರಡು ವಾರಗಳಲ್ಲಿ ಸಿನಿಮಾ ಗಳಿಸಿದ್ದು ಬರೀ 1.50 ಕೋಟಿ ರೂಪಾಯಿ ಮಾತ್ರ. ಇದನ್ನು ನೋಡಿದ ಸಿನಿ ವಿಮರ್ಶಕರು ಸಿನಿಮಾ ಫ್ಲಾಪ್ ಅಂದುಕೊಂಡಿದ್ದರು. ಆದರೆ, ನಿಜವಾದ ಪವಾಡ ಶುರುವಾಗಿದ್ದೇ ಅಲ್ಲಿಂದ.

ಜನರ ಬಾಯಿಂದ ಬಾಯಿಗೆ ಹಬ್ಬಿದ ‘ವರ್ಡ್ ಆಫ್ ಮೌತ್’ ಸಿನಿಮಾದ ದಿಕ್ಕನೇ ಬದಲಾಯಿಸಿತು. ಚಿತ್ರದ ಕಥೆ, ಭಕ್ತಿಭಾವ ಹಾಗೂ ದೃಶ್ಯ ವೈಭವಕ್ಕೆ ಮನಸೋತ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹರಿದು ಬರಲು ಶುರು ಮಾಡಿದರು. ನಾಲ್ಕನೇ ವಾರದಿಂದೀಚೆಗೆ ಈ ಚಿತ್ರ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಪ್ರತಿವಾರ ಸರಾಸರಿ 60 ಕೋಟಿ ರೂಪಾಯಿಗೂ ಹೆಚ್ಚು ನೆಟ್ ಕಲೆಕ್ಷನ್ ಮಾಡುತ್ತಾ ಬಂದಿತು.

ಸಾಮಾನ್ಯವಾಗಿ ಸಿನಿಮಾಗಳು ಎರಡು-ಮೂರು ವಾರಕ್ಕೆ ಪ್ರದರ್ಶನ ಮುಗಿಸುತ್ತವೆ. ಆದರೆ ‘ಹನುಮಾನ್ ಅಂಶ್’ ತನ್ನ 8ನೇ ವಾರಾಂತ್ಯದಲ್ಲಿ ಬರೋಬ್ಬರಿ 18.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಭಾನುವಾರ ಒಂದೇ ದಿನ 9 ಕೋಟಿ ರೂಪಾಯಿ ಗಳಿಸಿರುವುದು ಸಿನಿ ಪ್ರೇಕ್ಷಕರ ಕ್ರೇಜ್‌ಗೆ ಸಾಕ್ಷಿ.

400 ಕೋಟಿ ಕ್ಲಬ್‌ಗೆ ಸೇರ್ಪಡೆ

ಭಾರತದಲ್ಲಿ ಬಿಡುಗಡೆಯಾದ ಆರು ವಾರಗಳ ನಂತರ ವಿದೇಶಗಳಲ್ಲಿ ತಡವಾಗಿ ತೆರೆಕಂಡರೂ, ಅಲ್ಲೂ ‘ಹನುಮಾನ್ ಅಂಶ್’ ಜಾದೂ ಕೆಲಸ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ 33 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇದರೊಂದಿಗೆ ಚಿತ್ರದ ಜಾಗತಿಕ ಒಟ್ಟು ಗಳಿಕೆ ಬರೋಬ್ಬರಿ 402 ಕೋಟಿ ರೂಪಾಯಿ ದಾಟಿದೆ.

ಚಿತ್ರಮಂದಿರಗಳಲ್ಲಿ ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಶೈಲಿಯನ್ನು ನೋಡಿದರೆ, ‘ಹನುಮಾನ್ ಅಂಶ್’ ಶೀಘ್ರದಲ್ಲೇ 450 ಕೋಟಿಯ ಗಡಿಯನ್ನು ತಲುಪುವ ಲಕ್ಷಣಗಳಿವೆ. ಆ ಮೂಲಕ ‘ಹ್ಯಾಪಿ ನ್ಯೂ ಇಯರ್’, ‘ವಿಕ್ರಮ್’ ಮತ್ತು ‘ಅಂಧಾಧುನ್’ ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಗಳನ್ನು ಧೂಳಿಪಟ ಮಾಡುವುದು ಬಹುತೇಕ ಖಚಿತವಾಗಿದೆ.

Must Read