ಸ್ಮಶಾನ ಭೂಮಿ ಕಲ್ಪಿಸಲು ಜಿಲ್ಲಾಧಿಕಾರಿ-ತಹಶೀಲ್ದಾರರಿಗೆ ಅಧಿಕಾರ

ಹೊಸದಿಗಂತ ವರದಿ, ಕೊಡಗು:
ರಾಜ್ಯದಲ್ಲಿನ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವುದು ಸರ್ಕಾರದ ಮೂಲ ಉದ್ದೇಶವಾಗಿದ್ದು, ಸ್ಮಶಾನ ಭೂಮಿ ಕಲ್ಪಿಸಲು ಇರುವ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಸರ್ಕಾರದ ಜಮೀನು ಲಭ್ಯವಿರುವ ಕಡೆ ಸ್ಮಶಾನ ಉದ್ದೇಶಕ್ಕಾಗಿ 2 ಎಕರೆ ವಿಸ್ತೀರ್ಣದ ಜಮೀನನ್ನು ಕಾಯ್ದಿರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ಪ್ರತ್ಯಾಯೋಜಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 71 ರಡಿ ದತ್ತವಾದ ಅಧಿಕಾರದನ್ವಯ ಜಿಲ್ಲಾಧಿಕಾರಿಗಳು ರಾಜ್ಯದಲ್ಲಿ ಸರ್ಕಾರಿ ಜಮೀನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಗೋಮಾಳ ಜಮೀನು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೂ ಸ್ಮಶಾನಕ್ಕಾಗಿ ಮೀಸಲಿಡಲು ಕರ್ನಾಟಕ ಭೂ ಕಂದಾಯ ನಿಯಮಗಳು, 1966 ರ ನಿಯಮ 97(4)(3) ರಲ್ಲಿ ಜಿಲ್ಲಾಧಿಕಾರಿಗೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಜಮೀನು ‘ಬ’ ಖರಾಬು ಎಂದು ವರ್ಗೀಕೃತವಾಗಿದ್ದಲ್ಲಿ ಸ್ಮಶಾನದ ಉದ್ದೇಶವು ಸಾರ್ವಜನಿಕ ಉದ್ದೇಶವಾಗಿರುವುದರಿಂದ ಅಂತಹ ಜಮೀನುಗಳನ್ನು ಸಹ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 71 ರನ್ವಯ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಒತ್ತುವರಿಯಿಂದ ತೆರವುಗೊಳಿಸಿರುವ ಸರ್ಕಾರಿ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 71 ರನ್ವಯ ಜಿಲ್ಲಾಧಿಕಾರಿ ಅವರು ಸ್ಮಶಾನದ ಉದ್ದೇಶಕ್ಕಾಗಿ ಕಾಯ್ದಿರಿಸಲು ಅವಕಾಶ ನೀಡಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮೀಕರಣಕ್ಕಾಗಿ ಸಲ್ಲಿಸುವ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳು ಇದ್ದಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿ ಅಂತಹ ಅನರ್ಹ ಅರ್ಜಿಗಳನ್ನು ವಜಾಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಸ್ಮಶಾನಕ್ಕಾಗಿ ಕಾಯ್ದಿರಿಸಬಹುದಾಗಿದೆ.
ಈ ಎಲ್ಲಾ ಕ್ರಮಗಳನ್ನು ಕೈಗೊಂಡ ನಂತರವೂ ಸಹ ಯಾವುದೇ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಲು ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅಂತಹ ಗ್ರಾಮಗಳಲ್ಲಿ ಮಾರ್ಗಸೂಚಿ ಮೌಲ್ಯದ ಮೂರು ಪಟ್ಟು ದರದಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರಿ ಜಮೀನು ಒತ್ತುವರಿ: ಸರ್ಕಾರಿ ಜಮೀನು, ಕೆರೆ, ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರೆ ಜಲಾಶಯ, ಜಲಮೂಲಗಳೆಂದು ವರ್ಗೀಕೃತವಾದ ಜಮೀನುಗಳನ್ನು ಗ್ರಾಮ ನಕಾಶೆಯಲ್ಲಿ ರಸ್ತೆ ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ ಎಂದು ನಮೂದಾಗಿರುವ ಇತರೆ ಎಲ್ಲಾ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ಅವರಿಗೆ ದೂರು ನೀಡುವಂತೆ ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!