ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪ ಚುನಾವಣೆಯ ಬ್ಯುಸಿ ನಡುವೆಯೂ ಶುಕ್ರವಾರ ರಾತ್ರಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದೇವಿ ದರುಶನ ಪಡೆದರು.
ಬಳಿಕ ಮಾತನಾಡಿದ ಅವರು, ಶುಭ ಶುಕ್ರವಾರ ತಾಯಿ ಹಾಸನಾಂಬೆ ದರುಶನಕ್ಕೆ ನಾನು ನನ್ನ ಕುಟುಂಬ ಸಮೇತ ಆಗಮಿಸಿದ್ದೇನೆ. ಕಣ್ತುಂಬ ದೇವಿಯ ದರುಶನವಾಯಿತು ಎಂದರು.
ಈ ಬಾರಿಗೆ ಒಳ್ಳೆಯ ಮಳೆ ಬಂದು ಶಾಂತಿ, ನೆಮ್ಮದಿಯನ್ನು ತಾಯಿ ಕರುಣಿಸಿದ್ದಾಳೆ. ಮೈಸೂರು ದಸರಾವನ್ನೂ ಈ ಬಾರಿ ಬಹಳ ವಿಜೃಂಭಣೆಯಿಂದ ಮಾಡಿದ್ದೇವೆ ಎಂದರು. ಅಂತೆಯೇ ಹಾಸನದಲ್ಲೂ ಉತ್ತಮವಾಗಿ ಹಾಸನಾಂಬೆ ದೇವಿ ಉತ್ಸವ ಹಿನ್ನೆಲೆಯಲ್ಲಿ ಆಕರ್ಷಕ ರೀತಿಯಲ್ಲಿ ಅಲಂಕಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಯಿ ರಾಜ್ಯದ ಜನತೆಗೆ ನೆಮ್ಮದಿ, ಸುಖ, ಶಾಂತಿ ಕೊಡಲಿ ಎಂದು ಸರ್ಕಾರದಿಂದ ಪ್ರಾರ್ಥನೆ ಮಾಡಿದ್ದೇನೆ. ಹಿಂದೆಯೂ ಹಾಸನಾಂಬೆ ದೇವಿ ದರುಶನಕ್ಕೆ ಬಂದಿದ್ದೆ. ಹಾಗೆಯೇ ಇವತ್ತೂ ಕೂಡ ಬಂದಿದ್ದೇನೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ, ಐಶ್ವರ್ಯ, ವ್ಯವಸಾಯ-ವ್ಯಾಪಾರದಲ್ಲಿ ಸಮೃದ್ಧಿ ಕೊಡಲಿ ಎಂದು ಬೇಡಿದ್ದೇನೆ ಎಂದು ಹೇಳಿದರು.