ಪೂರ್ವ ಲಡಾಖ್‌ ನಲ್ಲಿ ಭಾರತ, ಚೀನಾ ಸೇನೆ ವಾಪಸ್ ಪ್ರಕ್ರಿಯೆ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಜಮ್ಮುವಿನ ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ನಿಯೋಜಿಸಿರುವ ಸೇನೆಗಳನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಭಾರತ ಹಾಗೂ ಚೀನಾ ಆರಂಭಿಸಿವೆ.

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಗಸ್ತು ನಡೆಸುವ ಮತ್ತು ಸೇನೆಯ ವಾಪಸಾತಿ ಸಂಬಂಧ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಕ್ಟೋಬರ್‌ 28-29ರ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದು ಸೇನೆಯ ಮೂಲಗಳು ಶುಕ್ರವಾರ ತಿಳಿಸಿವೆ.

ಸೇನೆಗಳ ವಾಪಸಾತಿ ಪೂರ್ಣಗೊಂಡ ನಂತರ ಈ ಎರಡೂ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಪಹರೆ ಕಾಯುವ ಕೆಲಸ ಆರಂಭಿಸಲಿವೆ. ಈ ಭಾಗದಲ್ಲಿ ಗಸ್ತು ನಡೆಸುವ ಪ್ರಕ್ರಿಯೆಯು ಅಂತಿಮವಾಗಿ, 2020ರ ಏಪ್ರಿಲ್‌ಗಿಂತ ಮುನ್ನ ಇದ್ದ ಸ್ಥಿತಿಗೆ ಮರಳುವ ವಿಶ್ವಾಸ ಮೂಡಿದೆ.

ಎರಡೂ ದೇಶಗಳ ನಡುವೆ ಗಡಿ ಪಹರೆಗೆ ಸಂಬಂಧಿಸಿದ ಒಪ್ಪಂದವನ್ನು ಮೊದಲು ರಾಜತಾಂತ್ರಿಕ ಮಟ್ಟದಲ್ಲಿ ಅಂತಿಮಗೊಳಿಸಲಾಗಿದ್ದು, ಆ ಬಳಿಕ ಮಿಲಿಟರಿ ಹಂತದ ಮಾತುಕತೆಗಳು ನಡೆದವು ಎಂದು ಮೂಲಗಳು ತಿಳಿಸಿವೆ. ಕಮಾಂಡರ್‌ ಮಟ್ಟದ ಮಾತುಕತೆಯ ಬಳಿಕ ಒಪ್ಪಂದವನ್ನು ಕಾರ್ಯರೂಪಕ್ಕಿಳಿಸುವ ಪ್ರಕ್ರಿಯೆ ಆರಂಭವಾಗಿದೆ.

ಕಜಾನ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಲಡಾಖ್‌ನ ಗಡಿ ವಿವಾದ ಪರಿಹರಿಸುವುದಕ್ಕೆ ಸಂಬಂಧಿಸಿದ ಒಪ್ಪಂದವನ್ನು ಅನುಮೋದಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!