ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಕೋಳಿಫಾರಮ್ ಒಂದರ ಕೋಣೆಯಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆಯಾಗಿದೆ.
ಪಶ್ಚಿಮ ಬಂಗಾಳ ಮೂಲದ ಕಾಳೆ, ಲಕ್ಷ್ಮಿ, ಉಷಾ ಮತ್ತು ಪೊಲ್ ಮೃತರು. ಪಶ್ಚಿಮ ಬಂಗಾಳದವರಾದ ಕುಟುಂಬ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕೆಲಸ ಅರಸಿ ಬಂದಿತ್ತು. ದೊಡ್ಡಬಳ್ಳಾಪುರದ ದೊಡ್ಡಬೆಳವಂಗಳದ ಹೊಳೆಯರಹಳ್ಳಿ ಕೋಳಿ ಫಾರಂ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.
ಉಸಿರುಕಟ್ಟಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಉಸಿರುಗಟ್ಟಿದ್ದು ಹೇಗೆ? ಏಕೆ ಎನ್ನುವುದು ಅನುಮಾನ ಮೂಡುವಂತಿದೆ. ಕುಟುಂಬ ಸದಸ್ಯರು ಕರೆ ಸ್ವೀಕರಿಸುತ್ತಿಲ್ಲ ಎಂದು ಕಾಳೆ ಅವರ ಮಗಳು ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರಿಸಿದ್ದಾಳೆ. ತದನಂತರ ಫಾರಂಗೆ ಬಂದು ನೋಡಿದಾಗ ಮನೆಯ ಕಿಟಿಕಿಗಳು ಮುಚ್ಚಿದ್ದು, ಹೊಗೆ ಕಾಣಿಸಿದೆ.
ಪೊಲೀಸರು ಬಂದು ಬಾಗಿಲು ಒಡೆದಾಗ ಮನೆಯ ತುಂಬ ಹೊಗೆ ಕಾಣಿಸಿದೆ. ನಾಲ್ವರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ.