ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಸಾವಿಗೀಡಾದ ರೀತಿಯಲ್ಲಿ ಮೃತದೇಹವು ಕಟೀಲು – ಗಿಡಿಗೆರೆ ಸಮೀಪ ಭಾನುವಾರ ಪತ್ತೆಯಾಗಿದೆ. ನಿಗೂಢ ಸಾವಿನ ಪ್ರಕರಣ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕಟೀಲು ಕೊಂಡೆಮೂಲ ನಿವಾಸಿ ತಾರನಾಥ (40) ಎಂಬಾತ ಮೃತವ್ಯಕ್ತಿಯಾಗಿದ್ದು ಶನಿವಾರ ಸಂಜೆ 6.30ರ ವೇಳೆಗೆ ಕುಡಿತದ ವಿಷಯವಾಗಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿತ್ತೆನ್ನಲಾಗಿದೆ. ಬಳಿಕ ಮನೆಯಿಂದ ತೆರಳಿದ್ದ ತಾರನಾಥ ಭಾನುವಾರ ಬೆಳಗ್ಗಿನವರೆಗೂ ಮನೆಗೆ ವಾಪಾಸು ಬಂದಿರಲಿಲ್ಲ. ಆತನಿಗಾಗಿ ಹುಡುಕಾಡಿದಾಗ ಬೆಳಗ್ಗೆ ಸುಮಾರು 7:30ರ ವೇಳೆಗೆ ಮನೆಯಿಂದ ಸುಮಾರು 100ಮೀ. ದೂರದಲ್ಲಿ ನೀರಿನ ಟ್ಯಾಂಕ್ ಪಕ್ಕದಲ್ಲಿ ಕುರುಚಲು ಪೊದರುಗಳ ಎಡೆಯಲ್ಲಿ ಕೇಬಲ್ ನಿಂದ ಕುತ್ತಿಗೆಗೆ ಬಿಗಿದುಕೊಂಡ ರೀತಿಯಲ್ಲಿ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ತಾರನಾಥನ ಮೃತದೇಹ ಪತ್ತೆಯಾಗಿದೆ.
ಈ ಮಧ್ಯೆ ವಿವಾಹಿತನಾಗಿದ್ದ ತಾರನಾಥನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈ ಹಿಂದೆ ಮೇಸ್ತ್ರಿ ಕೆಲಸಕ್ಕೆ ಮಾಡುತ್ತಿದ್ದು ಇತ್ತೀಚೆಗೆ ಹೆಚ್ಚಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದುದು ಗಮನಿಸಲಾಗಿದೆ. ಅದೇ ಮನೆಯಲ್ಲಿ ಆತನ ತಂದೆ ಹಾಗೂ ಸಹೋದರ ಇದ್ದಾರೆ.
ಸುದ್ದಿ ತಿಳಿದು ಬಜಪೆ ಪೊಲೀಸರು ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್. ಅವರ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಘಟನೆಯ ಬಗ್ಗೆ ಸಂಶಯಗಳು ವ್ಯಕ್ತವಾಗಿವೆ.
ಆತ್ಮಹತ್ಯೆಯೋ ?ಕೊಲೆಯೋ ?
ಮನೆಯಲ್ಲಿ ಮಾತಿನ ಚಕಮಕಿ ವಾಗ್ವಾದ ನಡೆದಿದೆ ಎನ್ನಲಾಗಿರುವುದಕ್ಕೂ ಕೇಬಲ್ ನಿಂದ ಕುತ್ತಿಗೆಗೆ ಬಿಗಿದುಕೊಂಡು ಮಲಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಮೃತದೇಹದ ಕುತ್ತಿಗೆಯಲ್ಲಿ ಬಿಗಿದು ತರಚಿದ ಗಾಯಗಳು ಕಂಡುಬಂದಿದ್ದು ಸಾವಿನ ಪ್ರಕರಣದಲ್ಲಿ ರಹಸ್ಯವಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಖಚಿತಪಟ್ಟಿಲ್ಲ.
ಸಂಶಯಕ್ಕೆ ಸಾಕ್ಕಿ!
ಈ ಮಧ್ಯೆ ಮೃತ ತಾರನಾಥನ ಪಕ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಬಟ್ಟೆ ಒಣಗಿಸಲು ಕಟ್ಟಲಾಗಿದ್ದ ಕೇಬಲನ್ನು ಕಿತ್ತು ತಂದು ಕುತ್ತಿಗೆಗೆ ಬಿಗಿಯಲಾಗಿರುವುದು ಘಟನಾ ಸ್ಥಳದಲ್ಲಿ ತನಿಖೆಯ ವೇಳೆ ತಿಳಿದು ಬಂದಿದ್ದು ಮೃತದೇಹದ ಪಕ್ಕದಲ್ಲಿ ಚಪ್ಪಲಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಡಲಾಗಿರುವುದು ಘಟನೆಯ ಬಗ್ಗೆ ಸಂಶಯಗಳನ್ನು ಇನ್ನಷ್ಟು ತೀವ್ರಗೊಳಿಸಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಶ್ರೀಕಾಂತ್, ಬಜಪೆ ಇನ್ಸ್ ಪೆಕ್ಟರ್ ಸಂದೀಪ್ ಅವರನ್ನೊಳಗೊಂಡ ಪೊಲೀಸರ ತಂಡ, ಫೋರೆನ್ಸಿಕ್, ಬೆರಳಚ್ಚು, ಶ್ವಾನ ದಳ ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಪರೀಲನೆ ನಡೆಸಿವೆ. ಮೃತದೇಹದ ಮರಣೋತ್ತರ ಶವಪರೀಕ್ಷೆ ಹಾಗೂ ತನಿಖಾ ತಂಡಗಳ ವರದಿಯ ಬಳಿಕವಷ್ಟೇ ಘಟನೆಯ ಖಚಿತತೆ ಸಿಗಬಹುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.