March 11, 2026
Wednesday, March 11, 2026
spot_img

ಗುಂಡಾಲ್ ಜಲಾಶಯದಲ್ಲಿ ಕುತ್ತಿಗೆಗೆ ಉರುಳು ಬಿಗಿದ ಸ್ಥಿತಿಯಲ್ಲಿ ಗಂಡು ಹುಲಿ ಕಳೇಬರ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಗುಂಡಾಲ್ ಜಲಾಶಯದಲ್ಲಿ ಇಂದು ಬೆಳಿಗ್ಗೆ ಗಂಡು ಹುಲಿಯೊಂದರ ಮೃತದೇಹ ಪತ್ತೆಯಾಗಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ಜಲಾಶಯದ ಹಿನ್ನೀರಿನಲ್ಲಿ ಹುಲಿಯ ಶವ ತೇಲುತ್ತಿರುವುದನ್ನು ಗಮನಿಸಿದ ಪ್ರವಾಸಿಗರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೊಳ್ಳೇಗಾಲ ಪೊಲೀಸರು ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ.

ಅರಣ್ಯಾಧಿಕಾರಿಗಳ ಪ್ರಾಥಮಿಕ ತನಿಖೆಯ ಪ್ರಕಾರ, ಹುಲಿಯ ಕುತ್ತಿಗೆಗೆ ಉರುಳು ಸಿಲುಕಿರುವುದು ಕಂಡುಬಂದಿದೆ. “ಹುಲಿಯು ಉರುಳಿನಿಂದ ತಪ್ಪಿಸಿಕೊಳ್ಳಲು ಒದ್ದಾಡಿ ಪ್ರಾಣ ಬಿಟ್ಟಿರುವ ಸಾಧ್ಯತೆ ಇದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಕಾಡುಪ್ರಾಣಿಗಳ ಬೇಟೆಗಾಗಿ ಕಿಡಿಗೇಡಿಗಳು ಇರಿಸಿದ್ದ ಉರುಳೇ ಎಂಬ ಸಂಶಯ ದಟ್ಟವಾಗಿದೆ.

ಪಶು ವೈದ್ಯರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಹತ್ವದ ಅಂಗಾಂಶಗಳ ಮಾದರಿಯನ್ನು ಸಂಗ್ರಹಿಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಬಿಳಿಗಿರಿ ಹುಲಿ ಸಂರಕ್ಷಿತ ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅರಣ್ಯದಂಚಿನ ಗ್ರಾಮಗಳಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆ ಈಗ ತೀವ್ರ ನಿಗಾ ವಹಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !