ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳ ವೀಸಾವನ್ನು ರದ್ದುಗೊಳಿಸಿದೆ. ಇದರಿಂದ ಪಾಕಿಸ್ತಾನಿಯರು ದೇಶ ಮರಳಿ ತವರಿಗೆ ಬಿಟ್ಟು ಹೋಗಲೇಬೇಕಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಸಿಸುತ್ತಿರುವ ಸುಮಾರು 5,000 ಪಾಕಿಸ್ತಾನಿ ಪ್ರಜೆಗಳ ಪಟ್ಟಿಯನ್ನು ಗುಪ್ತಚರ ಇಲಾಖೆ ಪೊಲೀಸರಿಗೆ ಹಸ್ತಾಂತರಿಸಿದೆ.
ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಪಟ್ಟಿಯನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (FRRO) ಈಗ ದಿಲ್ಲಿ ಪೊಲೀಸರ ವಿಶೇಷ ಶಾಖೆಯೊಂದಿಗೆ ಹಂಚಿಕೊಂಡಿದೆ. ಹೆಚ್ಚಿನ ಪರಿಶೀಲನೆ ಮತ್ತು ಗುರುತಿಸುವಿಕೆಗಾಗಿ ಸಂಬಂಧಪಟ್ಟ ಜಿಲ್ಲೆಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.
ಈ ಪಟ್ಟಿಯಲ್ಲಿ ದೀರ್ಘಾವಧಿಯ ವೀಸಾಗಳನ್ನು (LTVs) ಹೊಂದಿರುವ ಮತ್ತು ವಿನಾಯಿತಿ ಪಡೆದ ಹಿಂದೂ ಪಾಕಿಸ್ತಾನಿ ಪ್ರಜೆಗಳ ಹೆಸರುಗಳು ಕೂಡ ಸೇರಿವೆ. ಪಟ್ಟಿಯನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ಜಿಲ್ಲೆಗೆ ಹಸ್ತಾಂತರಿಸಲಾಗಿದೆ. ಈ ವಿಷಯದ ಕುರಿತು ಸಭೆ ಕರೆಯಲಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಲು ದಿಲ್ಲಿ ಪೊಲೀಸರಿಗೆ ಸೂಚಿಸಲಾಗಿದೆ. ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ದಿಲ್ಲಿಯಲ್ಲಿ ಸುಮಾರು 5,000 ಪಾಕಿಸ್ತಾನಿ ಪ್ರಜೆಗಳ ಎರಡು ಪಟ್ಟಿಗಳು ತಮ್ಮ ಬಳಿ ಇವೆ. ಕೆಲವರು ಇಲ್ಲಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇನ್ನು ಅನೇಕರು ಈಗಾಗಲೇ ಹೊರಟು ಹೋಗಿರುವುದರಿಂದ ಅವರಿದ್ದ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಏಪ್ರಿಲ್ 27ರ ಬಳಿಕ ವೈದ್ಯಕೀಯ, ರಾಜತಾಂತ್ರಿಕ ಮತ್ತು ದೀರ್ಘಾವಧಿಯ ವೀಸಾಗಳನ್ನು ಹೊರತುಪಡಿಸಿ ಉಳಿದ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಲಾಗುತ್ತಿದೆ. ವೈದ್ಯಕೀಯ ವೀಸಾಗಳು ಏಪ್ರಿಲ್ 29ರ ಅನಂತರ ಅಮಾನ್ಯವಾಗಲಿದೆ. ಹಿಂದು ಪಾಕಿಸ್ತಾನಿ ಪ್ರಜೆಗಳಿಗೆ ಈಗಾಗಲೇ ನೀಡಲಾದ ದೀರ್ಘಾವಧಿಯ ವೀಸಾಗಳು ಮಾತ್ರ ಮಾನ್ಯವಾಗಿರುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.