September 5, 2026
Saturday, September 5, 2026
spot_img

ಪಾಕಿಸ್ತಾನದಲ್ಲಿ ಭೀಕರ ಗಣಿ ದುರಂತ: ಮೀಥೇನ್ ಗ್ಯಾಸ್ ಸ್ಫೋಟಕ್ಕೆ 32 ಕಾರ್ಮಿಕರು ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಹೊರವಲಯದಲ್ಲಿ ಸಂಭವಿಸಿದ ಭೀಕರ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು ದುರಂತ ಅಂತ್ಯ ಕಂಡಿದ್ದಾರೆ. ಗಣಿಯ ಆಳದಲ್ಲಿ ಮೀಥೇನ್ ಅನಿಲ ಅತಿಯಾಗಿ ಸಂಗ್ರಹಗೊಂಡು ಈ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ:‌

ದುರಂತದ ವೇಳೆ ಗಣಿಯೊಳಗೆ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ 7 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ತದನಂತರ ನಡೆದ ತೀವ್ರ ಶೋಧ ಕಾರ್ಯಾಚರಣೆಯಲ್ಲಿ ಮತ್ತೊಮ್ಮೆ 25 ಮೃತದೇಹಗಳು ಪತ್ತೆಯಾಗಿವೆ. ಇನ್ನು 10 ಮಂದಿ ಕಾರ್ಮಿಕರು ಸುಮಾರು 4,000 ಅಡಿ ಆಳದ ಗಣಿಯೊಳಗೆ ಸಿಲುಕಿಕೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮೀಥೇನ್ ಅನಿಲ ಸ್ಫೋಟದಿಂದಾಗಿ ಗಣಿಯೊಳಗೆ ಆಮ್ಲಜನಕದ ಮಟ್ಟ ಶೂನ್ಯಕ್ಕೆ ಕುಸಿದಿರುವುದರಿಂದ ಅವರು ಬದುಕುಳಿಯುವ ಸಾಧ್ಯತೆ ತೀರಾ ಕ್ಷೀಣಿಸಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬೇಜವಾಬ್ದಾರಿತನದ ಆರೋಪ:

ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಗಳಲ್ಲಿ ಇಂತಹ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಗಣಿಗಳಲ್ಲಿ ಸೂಕ್ತ ಗಾಳಿ-ಬೆಳಕಿನ ವ್ಯವಸ್ಥೆ, ವಿಷಕಾರಿ ಅನಿಲ ಪತ್ತೆಹಚ್ಚುವ ಮಾನಿಟರಿಂಗ್ ಸಿಸ್ಟಮ್ ಹಾಗೂ ಯಾವುದೇ ಮೂಲಭೂತ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿಲ್ಲ ಎಂದು ಕಾರ್ಮಿಕ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಮಾಲೀಕರ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂದು ಆರೋಪಿಸಿವೆ.

ಇದನ್ನೂ ಓದಿ:

ಸರ್ಕಾರದ ಕ್ರಮ:

ಈ ಭೀಕರ ದುರಂತದ ಹಿನ್ನೆಲೆಯಲ್ಲಿ ಬಲೂಚಿಸ್ತಾನ್ ಪ್ರಾಂತ್ಯದ ಗಣಿ ಮತ್ತು ಖನಿಜ ಇಲಾಖೆ ಸಚಿವರಾದ ಶೋಯೆಬ್ ನೋಶೆರ್ವಾನಿ ಅವರು ತಕ್ಷಣವೇ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಮೃತರ ಕುಟುಂಬಗಳಿಗೆ ತುರ್ತು ಆರ್ಥಿಕ ನೆರವು ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ಅಲ್ಲದೆ, ಭವಿಷ್ಯದಲ್ಲಿ ಇಂತಹ ಸಾವುಗಳನ್ನು ತಡೆಯಲು ಎಲ್ಲ ಗಣಿಗಳ ಸುರಕ್ಷತಾ ನಿಯಮಗಳನ್ನು ಮರುಪರಿಶೀಲಿಸುವುದಾಗಿ ಭರವಸೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !