October 15, 2026
Thursday, October 15, 2026
spot_img

ಸಾಲವೂ ಇಲ್ಲ, ಬೆಳೆ ಪರಿಹಾರವೂ ಸಿಗುತ್ತಿಲ್ಲ: ಹಟ್ಟಿ ಚಿನ್ನದ ಗಣಿ ಕಂಪನಿ ವಿರುದ್ಧ ರೈತರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಮೀನಿಗೆ ಸೂಕ್ತ ಪರಿಹಾರ ನೀಡದೆ, ರೈತರ ಗಮನಕ್ಕೂ ತರದೆ ಭೂ ದಾಖಲೆಗಳಲ್ಲಿ (ಇಸಿ) ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಕಂಪನಿ (HGML) ವಿರುದ್ಧ ಸ್ಥಳೀಯ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿರುವ ಸಂತ್ರಸ್ತ ರೈತರು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.‌

ವಂಚನೆಯ ಆರೋಪವೇನು?:

ಹಟ್ಟಿ ಚಿನ್ನದ ಗಣಿ ಕಂಪನಿಯು ನಿಯಮಾವಳಿಗಳನ್ನು ಗಾಳಿಗೆ ತೂರಿ ಸುಮಾರು 390 ಎಕರೆ ಜಮೀನಿನ ಇಸಿ ದಾಖಲೆಗಳಲ್ಲಿ ರೈತರ ಗಮನಕ್ಕೆ ತರದೆ ಕಾನೂನುಬಾಹಿರವಾಗಿ ಕಂಪನಿಯ ಹೆಸರನ್ನು ನಮೂದಿಸಿಕೊಂಡಿದೆ ಎಂದು ರೈತರು ಗಂಭೀರವಾಗಿ ಆರೋಪಿಸಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ಇತ್ತ ಕಂಪನಿಯಿಂದ ಯಾವುದೇ ಪರಿಹಾರವೂ ಸಿಕ್ಕಿಲ್ಲ, ಅತ್ತ ಭೂಮಿಯ ಹಕ್ಕೂ ಇಲ್ಲದಂತಾಗಿದೆ.

ಸಂಕಷ್ಟದಲ್ಲಿ ಅನ್ನದಾತರು:

ದಾಖಲೆಗಳಲ್ಲಿ ಕಂಪನಿಯ ಹೆಸರು ನಮೂದಾಗಿರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕುಗಳಲ್ಲಿ ಕೃಷಿ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ, ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದರೆ ಸರ್ಕಾರದಿಂದ ಸಿಗುವ ಬೆಳೆ ಪರಿಹಾರವಾಗಲಿ ಅಥವಾ ವಿಮಾ ಹಣವಾಗಲಿ ರೈತರ ಕೈ ಸೇರುತ್ತಿಲ್ಲ. ಇದರಿಂದ ಕಂಗೆಟ್ಟಿರುವ ಅನ್ನದಾತರು ಈಗ ಬೀದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ:

ರೈತರ ಪ್ರಮುಖ ಬೇಡಿಕೆಗಳು:

ತಕ್ಷಣವೇ ಇಸಿ ದಾಖಲೆಗಳಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಹೆಸರನ್ನು ತೆಗೆದುಹಾಕಬೇಕು. ರೈತರ ಭೂಮಿಗೆ ನಿಗದಿಪಡಿಸಿದ ಬಾಕಿ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಪಡಿಸಬಾರದು.

ನ್ಯಾಯ ಸಿಗುವವರೆಗೂ ಮತ್ತು ಜಮೀನಿನ ದಾಖಲೆಗಳು ಸರಿಹೋಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸಂಘಟನೆಗಳು ಹಾಗೂ ಸಂತ್ರಸ್ತ ರೈತರು ಎಚ್ಚರಿಕೆ ನೀಡಿದ್ದಾರೆ. ಈ ವಿವಾದ ಈಗ ಜಿಲ್ಲಾಡಳಿತದ ಅಂಗಳ ತಲುಪಿದ್ದು, ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Must Read