ಹೊಸದಿಗಂತ ವರದಿ ವಿಜಯನಗರ
ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಮಾದರಿಯಲ್ಲೇ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ, ಸರ್ಕಾರ ಇಂತಹ ಪ್ರಕರಣಗಳನ್ನು ಬಗ್ಗು ಬಡಿಯದಿದ್ದರೇ, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿದೆ ಎಂದು ಶಾಸಕ ಬಸವನಗೌಡ ಯತ್ನಾಳ್ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿರುವುದಷ್ಟಕ್ಕೆ ಕೆಲ ದುಷ್ಕರ್ಮಿಗಳು ಠಾಣೆ ಮೇಲೆ ಕಲ್ಲುತೂರಾಟ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆದಿರುವುದು ಆತಂಕಕಾರಿ. ಗುಂಡಾಗಳು, ದೇಶದ್ರೋಹಿಗಳು ಯಾರೇ ಇರಲಿ, ಅವರ ಬಗ್ಗೆ ಸರ್ಕಾರ ತಮ್ಮ ಗಟ್ಟಿತನವನ್ನು ತೋರಿಸಬೇಕು. ರಾಜ್ಯದಲ್ಲಿ ಇಂತಹ ಕೆಟ್ಟ ಸಂಸ್ಕೃತಿ ಮುಂದುವರೆದಿದೆ, ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣಗಳಿಂದ ದುಷ್ಕರ್ಮಿಗಳಿಗೆ ಅವರಿಗೆ ಶಕ್ತಿಬಂದಂತಾಗಿದೆ, ಅಂತವರನ್ನು ಗುರುತಿಸಿ ಸರ್ಕಾರ ಬಿಸಿ ಮುಟ್ಟಿಸಬೇಕು, ಹಿಜಾಬ್ ಪ್ರಕರಣವನ್ನು ಬಗ್ಗು ಬಡಿಯದಿದ್ದರೇ ದೇಶಕ್ಕೇ ಇದು ಮಾರಕವಾಗಲಿದೆ.
ಕೆಜಿ ಹಳ್ಳಿಯಲ್ಲಿ ಸರಿಯಾಗಿ ಕ್ರಮಕೈಗೊಂಡಿದ್ದರೇ ಹುಬ್ಬಳ್ಳಿ ಘಟನೆ ನಡೆಯುತ್ತಿರಲಿಲ್ಲ, ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದವರಿಗೆ ಸರ್ಕಾರ ಬಿಸಿ ಮುಟ್ಟಿಸಬೇಕು, ಮುಖ್ಯಮಂತ್ರಿಗಳು ಬುಲ್ಡೋಜರ್ ಮೂಲಕ ಸ್ವಚ್ಛ ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ