ಹೊಸದಿಗಂತ ಡಿಜಿಟಲ್ ಡೆಸ್ಕ್:
ಋತುಚಕ್ರದ ಸಂದರ್ಭದಲ್ಲಿ ಎದುರಾಗುವ ತೀವ್ರವಾದ ಹೊಟ್ಟೆ ನೋವನ್ನು ಸಹಿಸಿಕೊಳ್ಳಲಾಗದೆ 19 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಕಲಬುರಗಿ ಜಿಲ್ಲೆಯ ಕಲಗಿ ತಾಲೂಕಿನ ಸಾಲಹಳ್ಳಿ ಮೂಲದ ಕೀರ್ತನಾ (19) ಎಂದು ಗುರುತಿಸಲಾಗಿದೆ. ಉದ್ಯೋಗದ ಹುಡುಕಾಟದಲ್ಲಿದ್ದ ಕೀರ್ತನಾ, ಕೆಲವು ದಿನಗಳ ಹಿಂದಷ್ಟೇ ತುಮಕೂರಿನ ಬ್ಯಾತ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದಳು. ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದ ಆಕೆ, ಸದ್ಯಕ್ಕೆ ಮನೆಯಲ್ಲೇ ಉಳಿದುಕೊಂಡಿದ್ದಳು.
ಪ್ರತಿ ತಿಂಗಳು ಋತುಚಕ್ರದ ಸಮಯದಲ್ಲಿ ಕೀರ್ತನಾ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಘಟನೆಯ ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ನೋವಿನ ಯಾತನೆ ತಾಳಲಾರದೆ ಮನನೊಂದು ಸೀರೆಯಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಯುವತಿಯ ಅಕಾಲಿಕ ಮರಣದಿಂದ ಆಕೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


