ಹೊಸದಿಗಂತ ವರದಿ ಕೊಪ್ಪಳ:
ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಜನಿಸಿದ ಶಿಶುವನ್ನು ಹೆಣ್ಣು ಎಂದಿದ್ದ ವೈದ್ಯರು, ಮೃತಪಟ್ಟ ಬಳಿಕ ಪೋಷಕರಿಗೆ ಗಂಡು ಶಿಶುವಿನ ಮೃತದೇಹ ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿಯ ಗೌರಿ ಎಂಬುವರಿಗೆ ಸೆ. 25ರಂದು ಹೆರಿಗೆಯಾಗಿತ್ತು. ಆಸ್ಪತ್ರೆ ಸಿಬ್ಬಂದಿ ನಿಮಗೆ ಹೆಣ್ಣು ಮಗು ಜನಿಸಿದೆ. ತೂಕ ಬಹಳಷ್ಟು ಕಡಿಮೆಯಿರುವ ಕಾರಣ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದರು.
ಗೌರಿ ಹಾಗೂ ಅವರ ಪತಿ ಕನಕಪ್ಪ ದಂಪತಿಗೆ ಆಸ್ಪತ್ರೆಯವರು ನೀಡಿದ ದಾಖಲೆಯಲ್ಲಿಯೂ ಹೆಣ್ಣು ಮಗು ಎಂದೇ ನಮೂದಿಸಲಾಗಿದೆ. ಈ ನವಜಾತ ಶಿಶು ಮೃತಪಟ್ಟಿದ್ದು ಪೋಷಕರಿಗೆ ಗಂಡು ಮಗುವಿನ ಮೃತದೇಹ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.