ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಆರ್‌ಎಲ್‍ಎಸ್ ಐವಿ ಗ್ಲೂಕೋಸ್ ಕಾರಣ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ದಾಳಿ ವೇಳೆ ಹತ್ತಾರು ಬಾಕ್ಸ್‌ಗಳಲ್ಲಿ ಆರ್‌ಎಲ್‍ಎಸ್ ಐವಿ ಗ್ಲೂಕೋಸ್ ಪತ್ತೆಯಾಗಿದೆ. ಪಿಬಿಪಿ ಸಂಸ್ಥೆ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸ್‍ಗಳು ಇದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಟ್ಟಿದ್ದ ಬಾಕ್ಸ್‌ಗಳನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಏಪ್ರಿಲ್ ತಿಂಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ಆರ್‍ಎಲ್‍ಎಸ್ ಐವಿ ಗ್ಲೂಕೋಸ್ ಸರಬರಾಜಾಗಿದೆ. ಒಂದು ಗಂಟೆಗೂ ಹೆಚ್ಚಿನ ಸಮಯದಿಂದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲಾದ್ಯಂತ ಕಳೆದ ಏಪ್ರಿಲ್ ತಿಂಗಳಿಂದಲೇ RLS ಐವಿ ಗ್ಲುಕೋಸ್ ಪೂರೈಕೆಯಾಗಿದ್ದು, ಎಲ್ಲೆಲ್ಲಿ ಪೂರೈಕೆಯಾಗಿದೆ ಎಂಬ ಬಗ್ಗೆ ಉಗ್ರಾಣ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಇದೆ.
ಏನಿದು IV ಫ್ಲೂಯಿಡ್ (ದ್ರಾವಣ)?
ರೋಗಿ ಹಾಗೂ ಆಶಕ್ತರ ದೇಹದಲ್ಲಿ ನೀರು, ಸಕ್ಕರೆ ಮತ್ತು ಕ್ಷಾರ ಅಂಶ ಕಾಪಾಡಲು ರಕ್ತನಾಳದ ಮೂಲಕ ದೇಹಕ್ಕೆ ಫ್ಲೂಯಿಡ್ ಸೇರಿಸಲಾಗುತ್ತದೆ. ನಿರ್ಜಲೀಕರಣದಿಂದ ಬಳಲುತ್ತಿವವರಿಗೆ ಚಿಕಿತ್ಸೆ ನೀಡಲು ಈ ದ್ರಾವಣವನ್ನೇ ಬಳಸಲಾಗುತ್ತದೆ. ನೀರು, ಗ್ಲುಕೋಸ್ ಸಕ್ಕರೆ ಮತ್ತು ಪೋಟ್ಯಾಷಿಯಂ, ಸೋಡಿಯಂ ಮತ್ತು ಕ್ಲೋರೈಡ್ನಂತಹ ಎಲೆಕ್ಟೋಲೈಟ್ಗಳನ್ನು ಈ ದ್ರಾವಣ ಹೊಂದಿರುತ್ತದೆ. ವಾಕರಿಕೆ, ವಾಂತಿ ಮತ್ತು ಅತಿಸಾರ ನಿಯಂತ್ರಿಸಿ, ರೋಗಿಯನ್ನು ಆರೋಗ್ಯ ಸ್ಥಿತಿಯಲ್ಲಿ ಇಡಲು ಈ ದ್ರಾವಣ ಸಹಕಾರಿಯಾಗುತ್ತದೆ. ಹೆರಿಗೆ ಆದ ನಂತರ ಬಾಣಂತಿಗೆ ಈ ದ್ರಾವಣವನ್ನು ನೀಡಲಾಗುತ್ತದೆ.
ಫ್ಲೂಯಿಡ್ ಬಳಸದಂತೆ ಸೂಚನೆ
ಸಿಜೇರಿಯನ್ ಬಳಿಕ ಈ ಫ್ಲೂಯಿಡ್ ನೀಡಲಾಗಿತ್ತು. ಸದ್ಯ ಈ ಫ್ಲೂಯಿಡ್ ಸಾವಿಗೆ ಕಾರಣವಾಗಿರು ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಫ್ಲೂಯಿಡ್ ಕ್ವಾಲಿಟಿ ಟೆಸ್ಟ್ಗೆ ಒಳಪಡಿಸಲಾಗಿದೆ. ಡಿಸೆಂಬರ್ 9 ರಂದು ವರದಿ ಬರಲಿದೆ. ಅಲ್ಲಿಯವರೆಗೂ ಫ್ಲೂಯಿಡ್ ಬಳಸದಂತೆ ಎಲ್ಲಾ ಆಸ್ಪತ್ರೆಗಳಿಗೂ ಇಲಾಖೆ ಸೂಚನೆ ನೀಡಿದೆ.