ಹೊಸದಿಗಂತ ವರದಿ, ವಿಜಯಪುರ:
ನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಶುದ್ಧೀಕರಣ ಘಟಕದಲ್ಲಿ ಮೂವರು ಮಕ್ಕಳು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇಲ್ಲಿನ ಗಚ್ಚಿನಕಟ್ಟಿ ಕಾಲೋನಿಯ ಮಿಹಿರ್ ಶ್ರೀಕಾಂತ ಜಾನಗೌಳಿ (7) ಹಾಗೂ ಗದಗ ಜಿಲ್ಲೆಯ ಅನುಷ್ಕಾ ಅನಿಲ ದಹಿಂಡೆ (10), ವಿಜಯ ಅನಿಲ ದಹಿಂಡೆ (7) ಮೃತಪಟ್ಟಿದ್ದು, ಇದಕ್ಕೆ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣ ಮಾಡಿರುವ ತ್ಯಾಜ್ಯದ ನೀರಿನ ಶುದ್ಧೀಕರಣ ಘಟಕದ ಸುತ್ತ ತಂತಿ ಬೇಲಿಯಾಗಲಿ, ತಡೆಗೋಡೆಯಾಗಲಿ ಹಾಗೂ ಇನ್ನಿತರ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಇಲ್ಲಿ ಯಾರಾದರೂ ಸಾರ್ವಜನಿಕರು ಬಂದು ನೀರಿನಲ್ಲಿ ಬಿದ್ದು ಸಾವಿಗೀಡಾಗುತ್ತಾರೆ ಅಂತ ತಿಳಿದರೂ ಯಾವುದೇ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳದೇ ಇರುವುದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ. ಈ ನಿರ್ಲಕ್ಷ್ಯದಿಂದ ನನ್ನ ಮಗ ಹಾಗೂ ಎರಡು ಮೊಮ್ಮಕಳು ಶುದ್ಧೀಕರಣ ಘಟಕದಲ್ಲಿ ಬಿದ್ದು ಮೃತಪಟ್ಟಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಕಾಂತ ಮಹಾದೇವ ಜಾನಗೌಳಿ ದೂರು ನೀಡಿದ್ದಾರೆ.
ಈ ಸಂಬಂಧ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.