ಮುರುಘಾಮಠದ ಕುರುಬರಹಟ್ಟಿ ಕೆರೆಯಲ್ಲಿ ಮೀನುಗಳ ಮಾರಣ ಹೋಮ

ಹೊಸದಿಗಂತ ವರದಿ,ಚಿತ್ರದುರ್ಗ: 
ಚಿತ್ರದುರ್ಗ ನಗರದ ಮುರುಘಾಮಠದ ಮುಂದಿರುವ ಮಠದ ಕುರುಬರಹಟ್ಟಿ ಕೆರೆಯಲ್ಲಿ ರಾಶಿ ರಾಶಿ ಮೀನುಗಳು ಸಾವನ್ನಪ್ಪಿವೆ. ಮೀನಿನ ಮೃತ ದೇಹಗಳು ನೀರಿನಲ್ಲಿ ತೇಲುತ್ತಿದ್ದು, ಈ ಮಾರ್ಗದಲ್ಲಿ ಸಾಗುವ ಜನರಿಗೆ ದುರ್ಗಂಧ ಬೀರುತ್ತಿವೆ. ಕೆರೆಯಲ್ಲಿ ಸತ್ತ ಮೀನುಗಳಿಂದ ಸುತ್ತಮುತ್ತಲ ವಾತಾವರಣ ಕಲುಷಿತಗೊಂಡಿದೆ. ಪರಿಣಾಮವಾಗಿ ಕೆರೆ ದಂಡೆಯಲ್ಲಿ ವ್ಯಾಪಾರ ನಡೆಸುತ್ತಿರುವ ಚಿಕ್ಕಪುಟ್ಟ ಅಂಗಡಿಗಳವರು ಉಸಿರುಕಟ್ಟಿದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ.

ಅಲ್ಲಿನ ಅಂಗಡಿಗಳವರು ಹೇಳುವಂತೆ ಕಳೆದ ನಾಲ್ಕೈದು ದಿನಗಳಿಂದ ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿವೆ. ಆದರೆ ಸಂಬಂಧಿಸಿದ ಇಲಾಖೆಗಳ ಯಾವುದೇ ಅಧಿಕಾರಿಗಳು ಈ ಕುರಿತು ಗಮನ ನೀಡಿಲ್ಲ. ಸತ್ತ ಮೀನುಗಳನ್ನು ನೀರಿನಿಂದ ತೆರವು ಮಾಡಿ ಸ್ವಚ್ಛಗೊಳಿಸುವ ಕಾರ್ಯ ಮಾಡಿಲ್ಲ. ಇದರಿಂದಾಗಿ ಕಳೆದ ಎರಡು ಮೂರು ದಿನಗಳಿಂದ ಸತ್ತ ಮೀನುಗಳಿಂದ ದುರ್ನಾತ ಬರುತ್ತಿದೆ. ಬಸ್ಸು, ಕಾರು, ದ್ವಿಚಕ್ರ ವಾಹನ ಸೇರಿದಂತೆ ಈ ಮಾರ್ಗದಲ್ಲಿ ಸಾಗುವ ವಾಹನ ಸವಾರರು ಹಾಗೂ ದಾರಿಹೋಕರಿಗೆ ದುರ್ಗಂಧ ಮೂಗಿಗೆ ರಾಚುತ್ತಿದೆ.

ಇನ್ನು ಕೆರೆದಂಡೆಯಲ್ಲಿ ಟೀ ಅಂಗಡಿ, ಎಗ್‌ರೈಸ್, ಗೋಬಿ ಮಂಚೂರಿ ಮತ್ತಿತರ ಆಹಾರ ತಯಾರಿ ಮಾರಾಟ ಮಾಡುವ ಅಂಗಡಿಗಳಿವೆ. ಸಾಲದಕ್ಕೆ ಮುರುಘಾಮಠವೂ ಕೆರೆಯ ಪಕ್ಕದಲ್ಲೇ ಇದೆ. ಇಲ್ಲಿ ಪ್ರತಿದಿನ ಸಾವಿರಾರು ಜನ ಬಂದು ಹೋಗುತ್ತಿರುತ್ತಾರೆ. ಇವರೆಲ್ಲರೂ ಈ ಮೀನುಗಳ ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ. ಇನ್ನು ಬೆಳಿಗ್ಗೆಯಿಂದ ಸಂಜೆವರೆಗೆ ಅಂಗಡಿಯಲ್ಲಿದ್ದು, ವ್ಯಾಪಾರ ವಹಿವಾಟು ನಡೆಸುವ ಅಂಗಡಿಯವರಿಗೆ ಉಸಿರಾಡುವುದೂ ಕಷ್ಟವಾಗಿದೆ. ಈ ದುರ್ನಾತ ಕುಡಿದು ತಲೆನೋವು ಬರುತ್ತಿದೆ ಎನ್ನುತ್ತಾರೆ ಅಂಗಡಿ ವ್ಯಾಪಾರಿಗಳು.

ಕೆರೆಯ ಪಕ್ಕದಲ್ಲೇ ನೂತನ ಬಡಾವಣೆ ಇದೆ. ಅಲ್ಲಿ ಅನೇಕ ನೂತನ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿನ ಮನೆಗಳಿಗೆ ಬಳಸುವ ಬಣ್ಣ ಹಾಗೂ ಕಟ್ಟಡಗಳ ಸ್ವಚ್ಛತೆಗೆ ಬಳಸುವ ರಾಸಾಯನಿಕಗಳನ್ನು ತೊಳೆದು ಹೊರಗೆ ಚೆಲ್ಲಲಾಗುತ್ತಿದೆ. ಇಂತಹ ಕಲುಷಿತ ನೀರು ಕೆರೆಯ ಒಡಲನ್ನು ಸೇರಿದ ಪರಿಣಾಮ ಕೆರೆಯಲ್ಲಿನ ರಾಶಿ ರಾಶಿ ಮೀನುಗಳು ಸತ್ತಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇರಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಕುರಿತು ಕೂಡಲೇ ಗಮನ ನೀಡಬೇಕು. ಕೆರೆಯನ್ನು ಸ್ವಚ್ಛಗೊಳಿಸಿ ಇಲ್ಲಿನ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂಬುದು ಸ್ಥಳೀಯರ ಆಗ್ರಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!