ಸ್ಕೂಟಿ ಸವಾರ ಸಾವು ಪ್ರಕರಣ: ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ, ಸ್ಥಳದಲ್ಲೇ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಕಡಬ -ಪಂಜ ರಸ್ತೆಯಲ್ಲಿ ಸ್ಕೂಟಿ ಮೇಲೆ ಮರ ಬಿದ್ದು ಸವಾರ ಸಾವಿಗೀಡಾದ ಪ್ರಕರಣ ಕಾವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದ ರಸ್ತೆ ಪಕ್ಕದ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ಸಾರ್ವಜನಿಕರು ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಜನರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಅವಕಾಶ ನೀಡಲಿಲ್ಲ. ಅದರಿಂದಾಗಿ ಕಡಬ -ಪಂಜ ರಸ್ತೆಯಲ್ಲಿ ಸುಮಾರು ಎರಡೂವರೆ ತಾಸು ವಾಹನ ಸಂಚಾರ ಸ್ಥಗಿತಗೊಂಡಿತು.

ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರು ಪ್ರತಿಭಟನ ಸ್ಥಳಕ್ಕೆ ಆಗಮಿಸಿ ವಾರದೊಳಗೆ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮೃತ ವ್ಯಕ್ತಿಗೆ ಸರಕಾರದಿಂದ ಪರಿಹಾರ ಒದಗಿಸಲು ಪೂರಕ ವರದಿ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.

ಕಡಬ ಎಸ್ ಐ ಅಭಿನಂದನ್ ಎಂ. ಎಸ್. ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳು ಹಾಜರಿದ್ದರು.

ಸ್ಥಳೀಯ ಮುಂದಾಳುಗಳಾದ ಕೃಷ್ಣ ಶೆಟ್ಟಿ ಕಡಬ, ಫಝಲ್ ಕೋಡಿoಬಾಳ, ರಾಧಾಕೃಷ್ಣ ಕೋಲ್ಪೆ, ರಘುರಾಮ ನಾಯ್ಕ್ ಕುಕ್ಕೆರೆಬೆಟ್ಟು, ಸೀತಾರಾಮ ಗೌಡ ಕೆ., ಅನೀಶ್ ಲೋಬೊ, ಬಾಲಕೃಷ್ಣ ಡಿ. ಕೆ., ಜಯಂತ ಕೆ., ಕೇಶವ ಬೇರಿಕೆ, ರಾಮಣ್ಣ ಜಾಲ್ತಾರು, ಮೋಹನ ಕೋಡಿoಬಾಳ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಶನಿವಾರ ಬೆಳಗ್ಗೆ ಕಡಬ -ಪಂಜ ರಸ್ತೆಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಎಡಮಂಗಲ ನಿವಾಸಿ ಸೀತಾರಾಮ ಗೌಡ ಅವರು ರಸ್ತೆ ಪಕ್ಕದ ಮರ ಉರುಳಿಬಿದ್ದ ವೇಳೆ ಮರದಡಿ ಸಿಲುಕಿ ಮೃತಪಟ್ಟಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!