ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನ ಆರೋಗ್ಯ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಪೆಂಟಾವಲೆಂಟ್ ವ್ಯಾಕ್ಸಿನ್ ಪಡೆದ ಎರಡು ನವಜಾತ ಶಿಶುಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ವಿನೋದ್ ಮತ್ತು ರಂಜಿತಾ ದಂಪತಿಯ ಪುತ್ರಿ ಎರಡು ತಿಂಗಳ ಹೆಣ್ಣು ಮಗುವಿಗೆ ಕೋಟೆಯ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗಿದ್ದು, ಶುಕ್ರವಾರ ಮಗು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಮತ್ತೊಂದು ಪ್ರಕರಣದಲ್ಲಿ, ಭಕ್ತರಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಎರಡೂವರೆ ತಿಂಗಳ ಗಂಡು ಮಗು ಕೂಡ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇದರ ಬೆನ್ನಲ್ಲೇ ರಾಜ್ಯ ನೋಡಲ್ ಅಧಿಕಾರಿ ಡಾ. ಸುಧೀರ್ ನಾಯಕ್, ಜಿಲ್ಲಾ ನೋಡಲ್ ಅಧಿಕಾರಿ ಡಾ. ಮೋಹನ್ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮರಿಯಪ್ಪ ಸೇರಿದಂತೆ ತಜ್ಞರ ತಂಡ ಶನಿವಾರ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.
ಬಳಿಕ ವಿಶ್ಲೇಷಣೆಗಾಗಿ ಲಸಿಕೆ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವರದಿಗಳು ಲಭ್ಯವಾದ ನಂತರ ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಪೆಂಟಾವಲೆಂಟ್ ಲಸಿಕೆಯನ್ನು ಮಕ್ಕಳನ್ನು ಐದು ಗಂಭೀರ ಕಾಯಿಲೆಗಳಾದ ಡಿಫ್ತೀರಿಯಾ, ಟೆಟನಸ್, ನಾಯಿಕೆಮ್ಮು (ವೂಪಿಂಗ್ ಕೆಮ್ಮು), ಹೆಪಟೈಟಿಸ್ ಬಿ ಮತ್ತು ಹಿಮೋಫಿಲಸ್ ಇನ್ಫ್ಲುಯೆನ್ಸ ಟೈಪ್ ಬಿ ರೋಗಳನ್ನು ತಡೆಗಟ್ಟುವಲ್ಲಿ ನೆರವಾಗಲಿದೆ. ಆದರೆ ಲಸಿಕೆ ಪಡೆದ ಶಿಶುಗಳ ಸಾವಿಗೆ ಕಾರಣ ಏನೆಂಬುದು ತನಿಖೆಯಿಂದ ಬಹಿರಂಗವಾಗಬೇಕಾಗಿದೆ.