ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಮುಂದುವರೆದಿದೆ, ಎರಡು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಪೂಜಾ ಕಡಕಭಾವಿ (25) ಎಂದು ಗುರುತಿಸಲಾಗಿದೆ. ಡಿಸೆಂಬರ್ 24 ರಂದು ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ನಂತರ ಆಕೆಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು ಎನ್ನಲಾಗಿದ್ದು, ಅದೇ ದಿನ ಗಂಡು ಮಗುವಿಗೆ ಜನ್ಮ ನೀಡಿದ್ದರು ಎಂದು ತಿಳಿದುಬಂದಿದೆ.
ನವಜಾತ ಶಿಶುವಿನ ತೂಕ ತುಂಬಾ ಕಡಿಮೆಯಾಗಿದ್ದ ಕಾರಣ ವೈದ್ಯರು ಐಸಿಯುನಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದರು. ಈ ನಡುವೆ ಪೂಜಾ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ.
ಪೂಜಾ ಅವರು ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಅವಧಿಪೂರ್ವ ಮಗುವೊಂದನ್ನು ಗರ್ಭಪಾತ ಮಾಡಿಸಿದ್ದರು. ಗುರುವಾರ 5ನೇ ಮಗುವಿಗೆ ಜನ್ಮ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಈ ನಡುವೆ ಮಹಿಳೆಯ ಶವವನ್ನು ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆರಿಗೆ ವಾರ್ಡ್‌ನ ವೈದ್ಯ ವಸಂತ ಕಬ್ಬೂರು ಅವರು, ಪೂಜಾಗೆ ಉಸಿರಾಟ ಮತ್ತು ಮೆದುಳಿನ ಸಮಸ್ಯೆಗಳಿದ್ದವು. ನಾವು ಆಕೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದೆವು ಆದರೆ ಆಕೆಯ ಸ್ಥಿತಿ ಹದಗೆಟ್ಟು ಸಾವನ್ನಪ್ಪಿದರು. ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಡಿ.22ರಂದು ಗರ್ಭಿಣಿ ವೈಶಾಲಿ ಕೊಟಬಾಗಿ ಎಂಬುವವರು ಸಾವನ್ನಪ್ಪಿದ್ದರು. ಈ ಮೂಲಕ ಆಸ್ಪತ್ರೆಯಲ್ಲಿ 7 ದಿನಗಳಲ್ಲಿ ಇಬ್ಬರು ಬಾಣಂತಿಯರು ಸಾವನ್ನಪ್ಪಿದಂತಾಗಿದೆ.