ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಕ್ಕಿಂ ನಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ ಎಂದು ಸಿಕ್ಕಿಂ ಸರ್ಕಾರವು ಹೇಳಿದೆ. ಘಟನೆಯಲ್ಲಿ 76 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದೆ.
ಅಕ್ಟೋಬರ್ 2ರಂದು ಸಿಕ್ಕಿಂನಲ್ಲಿ ಮೇಘಸ್ಫೋಟ ಉಂಟಾಗಿತ್ತು. ಇದರಿಂದಾಗಿ ಸಿಕ್ಕಿಂನ ನಾಲ್ಕು ಜಿಲ್ಲೆಗಳಲ್ಲಿ ಸಾವಿರಾರು ಜನರು ಬಾಧಿತರಾಗಿದ್ದಾರೆ ಎಂದು ಸಿಕ್ಕಿಂನ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು (ಎಸ್‌ಎಸ್‌ಡಿಎಂಎ) ತಿಳಿಸಿದೆ.
ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ, ಮೇಘಸ್ಫೋಟದಿಂದಾಗಿ ಇದುವರೆಗೆ 40 ಮಂದಿ ಸಾವನ್ನಪ್ಪಿದ್ದು, 76 ಮಂದಿ ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ 4418 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಮಂಗನ್ ಜಿಲ್ಲೆಯಿಂದ 2,705 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಗ್ಯಾಂಗ್ಟಕ್ನಿಂದ 1025 ಮಂದಿ, ಪ್ಯಾಕೋಂಗ್ ಜಿಲ್ಲೆಯಲ್ಲಿ 58 ಮಂದಿ, ನಾಮ್ಚಿ ಜಿಲ್ಲೆಯಲ್ಲಿ 630 ಮಂದಿಯನ್ನು ಸ್ಥಳಾಂತರಿಸಲಾಗಿದೆ. 40 ಸಾವುಗಳಲ್ಲಿ ಪ್ಯಾಕೋಂಗ್ ಜಿಲ್ಲೆಯೊಂದರಲ್ಲೇ 15 ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ.