March 23, 2026
Monday, March 23, 2026
spot_img

ಸಾಲವೇ ಶೂಲವಾಯ್ತು: ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಗೋಕುಲ ರಸ್ತೆ ರಾಮಲಿಂಗೇಶ್ವರ ನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದ್ದು, ಸ್ವತಃ ಆತನೇ ಪೊಲೀಸರಿಗೆ ಶರಣಾಗಿದ್ದಾನೆ.

ತೈಸಿನ್ ಶಿಗ್ಗಾವಿ(27) ಹತ್ಯೆಯಾದ ಮಹಿಳೆ. ಆಕೆಯ ಇರ್ಫಾನ್ ಶಿಗ್ಗಾವಿ(34) ಹತ್ಯೆ ಮಾಡಿದ ಆರೋಪಿ.

ಬಂಗಾರ ಸಾಲವಾದ 20 ಸಾವಿರ ರೂ. ಮರು ಪಾವತಿ ಮಾಡುವ ವಿಚಾರಕ್ಕೆ ಸಂಬಂಧಿಸಿ ಪತಿ, ಪತ್ನಿ‌ ನಡುವೆ ಪದೆ ಪದೇ ಜಗಳವಾಗುತ್ತಿತ್ತು. ಸೋಮವಾರ‌ ಬೆಳಿಗ್ಗೆ ಮತ್ತೆ ಜಗಳ ನಡೆದಿದ್ದು, ಕೋಪಗೊಂಡ‌ ಪತಿ ಇರ್ಫಾನ್ ತನ್ನ ಪತ್ನಿ ತೈಸಿನ್ ಗೆ ಚಾಕುವಿನಿಂದ ಎದೆಯ, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಘಟನಾಸ್ಥಳಕ್ಕೆ ಗೋಕುಲ ರಸ್ತೆ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ, ಮೃತ ಶವವನ್ನು ನಗರದ ಕೆಎಂಸಿಆರ್ ಐ ಆಸ್ಪತ್ರೆ ರವಾನಿಸಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮೂಲತಃ ಕೇಶ್ವಾಪುರದ ಗಾಂಧಿವಾಡ ನಿವಾಸಿಯಾದ ಇರ್ಫಾನ್ ಒಂದು ತಿಂಗಳ ಹಿಂದೆ ರಾಮಲಿಂಗೇಶ್ವರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭೇಟಿ ನೀಡಿ ಪರಿಶೀಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !